ಕೊಪ್ಪಳ: ತಾಲೂಕಿನ ದದೇಗಲ್ ಬಳಿ ಇರುವ ಡಾ. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.
ವಿದ್ಯಾರ್ಥಿಗಳಿಗೆ ಸಮರ್ಪಕ ಊಟ ನೀಡಲು ಅಗತ್ಯ ತರಕಾರಿಯನ್ನೂ ಖರೀದಿಸಲು ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ವಸತಿ ನಿಲಯದಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಕಳೆದ ಮೂರು ತಿಂಗಳಿಂದ ವಾರ್ಡನ್ ಹಾಸ್ಟೆಲ್ಗೆ ಭೇಟಿ ನೀಡಿಲ್ಲ ಎಂದು ಆರೋಪಿಸಲಾಗಿದೆ. ಊಟಕ್ಕೆ ತರಕಾರಿ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಪಕ್ಕದ ವಸತಿ ನಿಲಯದಿಂದ ತರಕಾರಿ ತಂದು ಅಡುಗೆ ಮಾಡಲಾಗುತ್ತಿದೆ ಎನ್ನಲಾಗಿದೆ.
ವಿದ್ಯಾರ್ಥಿಗಳ ಊಟಕ್ಕಾಗಿ ತರಕಾರಿ, ಮೊಟ್ಟೆ ಹಾಗೂ ಚಿಕನ್ ಖರೀದಿಸಲು ಸುಮಾರು ₹50 ಸಾವಿರ ಹಣವನ್ನು ನೈಟ್ ವಾಚ್ಮನ್ ಹಾಗೂ ಅಡುಗೆ ಸಹಾಯಕ ಸಿಬ್ಬಂದಿಯೇ ತಮ್ಮ ಸ್ವಂತ ಹಣದಿಂದ ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಪಕ್ಕದ ವಸತಿ ನಿಲಯದಿಂದ ಅಗತ್ಯ ವಸ್ತುಗಳನ್ನು ತಂದು ಅಡುಗೆ ಮಾಡುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಹಾಗೂ ಗುಣಮಟ್ಟದ ಆಹಾರ ಒದಗಿಸಬೇಕಾದ ವಸತಿ ನಿಲಯದಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.



