ಬೆಂಗಳೂರು: ಸಹಪಾಠಿಯೊಬ್ಬನ ಕಿರುಕುಳದಿಂದ ಬೇಸತ್ತು 22 ವರ್ಷದ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಮಕ್ಕಿ ಮೂಲದ ವಾಣಿ (22) ಮೃತ ಯುವತಿ.
ಸುಮಾರು ಒಂದು ವರ್ಷದ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ವಾಣಿ, ನಗರದ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಆಗರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆತ್ಮಹತ್ಯೆಗೆ ಮುನ್ನ ವಾಣಿ ಡೆತ್ನೋಟ್ ಬರೆದಿಟ್ಟಿದ್ದು, ಕಾಲೇಜಿನ ಸಹಪಾಠಿಯಾಗಿದ್ದ ಅಭಿಷೇಕ್ ಎ.ಎಸ್. ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ಡೆತ್ನೋಟ್ನಲ್ಲಿ, ಅಭಿಷೇಕ್ ಒಂದು ವರ್ಷದಿಂದ ವಾಟ್ಸ್ಆ್ಯಪ್ ಮೂಲಕ ವಿಡಿಯೋ ಹಾಗೂ ಫೋಟೋಗಳನ್ನು ಕಳುಹಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಅಲ್ಲದೆ, “ರೂಮ್ಗೆ ಬಾ, ಇಲ್ಲದಿದ್ದರೆ ನಿಮ್ಮ ಮನೆಯ ಮರ್ಯಾದೆ ಹಾಳು ಮಾಡುತ್ತೇನೆ” ಎಂದು ಬೆದರಿಕೆ ಹಾಕುತ್ತಿದ್ದ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
“ನನ್ನ ಕುಟುಂಬದ ಮರ್ಯಾದೆ ಉಳಿಯಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಮಾಡುತ್ತಿದ್ದೇನೆ. ನನ್ನ ಸಾವಿಗೆ ಅಭಿಷೇಕ್ ಕಾರಣ. ಅವನಿಗೆ ಶಿಕ್ಷೆ ಆಗಬೇಕು, ಅದೇ ನನ್ನ ಕೊನೆಯ ಆಸೆ” ಎಂದು ವಾಣಿ ಬರೆದಿದ್ದಾರೆ.
ಘಟನೆ ಸಂಬಂಧ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್ನೋಟ್ನಲ್ಲಿ ಹೆಸರು ಉಲ್ಲೇಖವಾಗಿರುವ ಅಭಿಷೇಕ್ನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.



