ಕೋಲಾರ: ಬಂಗಾರಪೇಟೆ ತಾಲೂಕಿನ ಗಡಿಭಾಗದಲ್ಲಿ ಒಂಟಿ ಕಾಡಾನೆಯ ಓಡಾಟ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಕಾಮಸಮುದ್ರ ಅರಣ್ಯ ಪ್ರದೇಶದಿಂದ ಹೊರಬಂದಿರುವ ಕಾಡಾನೆ, ದೋಣಿಮಡಗು ಮತ್ತು ಬಲಮಂದೆ ಗ್ರಾಮಗಳ ಸುತ್ತಮುತ್ತ ಸಂಚರಿಸುತ್ತಿದೆ. ಇದರಿಂದ ಕಾಡಂಚಿನ ಗ್ರಾಮಗಳ ಜನರು ಮನೆಯಿಂದ ಹೊರಬರಲು ಹಾಗೂ ರೈತರು ಜಮೀನುಗಳಿಗೆ ತೆರಳಲು ಆತಂಕಪಡುವಂತಾಗಿದೆ.
ಕಳೆದ ಎರಡು ದಿನಗಳಿಂದ ಈ ಭಾಗದಲ್ಲೇ ಕಾಣಿಸಿಕೊಳ್ಳುತ್ತಿರುವ ಕಾಡಾನೆ ಆಹಾರ ಮತ್ತು ನೀರಿಗಾಗಿ ನಾಡಿನತ್ತ ಬಂದಿರುವ ಸಾಧ್ಯತೆಯಿದೆ. ಕಾಡಾನೆ ನಿರಂತರವಾಗಿ ಗ್ರಾಮಗಳ ಸಮೀಪವೇ ಓಡಾಡುತ್ತಿರುವುದರಿಂದ ಸ್ಥಳೀಯರು ಎಚ್ಚರಿಕೆಯಿಂದ ಇರುವಂತಾಗಿದೆ.
ಕಾಡಾನೆಯನ್ನು ಯಾವುದೇ ಅಪಾಯವಿಲ್ಲದೆ ಕಾಡಿನತ್ತ ಮರಳಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಆನೆಯನ್ನು ತಮಿಳುನಾಡಿನ ಕೃಷ್ಣಗಿರಿ ಅರಣ್ಯ ಪ್ರದೇಶದತ್ತ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.
ಇನ್ನೊಂದೆಡೆ, ಕಾಡಾನೆ ಇರುವ ಪ್ರದೇಶದ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಕಾಡಂಚಿನ ಪ್ರದೇಶಗಳಿಗೆ ತೆರಳದಂತೆ ಅರಣ್ಯ ಇಲಾಖೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದೆ. ಕಾಡಾನೆಯ ಚಲನವಲನದ ಮೇಲೆ ನಿಗಾ ಇಟ್ಟಿರುವ ಸಿಬ್ಬಂದಿ, ಜನರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.









