ಚಿಕ್ಕಬಳ್ಳಾಪುರ: ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣ ಆರಂಭಿಸಿದ್ದ 30 ಮಂದಿ ಪ್ರಯಾಣಿಕರು ನಡುರಾತ್ರಿಯಲ್ಲಿ ನಡು ರಸ್ತೆಯಲ್ಲೇ ಪರದಾಡಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ನಡೆದಿದೆ.
ಮಂತ್ರಾಲಯದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ರಾಷ್ಟ್ರೀಯ ಹೆದ್ದಾರಿ 44ರ ಅಗಲಗುರ್ಕಿ ಬಳಿ ದಿಢೀರ್ ಕೆಟ್ಟು ನಿಂತಿದೆ. ರಾತ್ರಿ 9.30ಕ್ಕೆ ಬೆಂಗಳೂರಿಗೆ ತಲುಪಬೇಕಿದ್ದ ಬಸ್ ಮಾರ್ಗಮಧ್ಯೆಯೇ ಸ್ಥಗಿತಗೊಂಡಿದ್ದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ 30 ಮಂದಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರಯಾಣಿಕರು ವಿವಿಧ ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ಕುಕ್ಕೇಶ್ರೀ ಟ್ರಾವೆಲ್ಸ್ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಆದರೆ, ಪ್ರಯಾಣಕ್ಕೆ ಬಂದಿದ್ದು ಸ್ಟ್ರೀಮ್ಲೈನ್ ಟೂರ್ಸ್ ಮತ್ತು ಟ್ರಾವೆಲ್ಸ್ಗೆ ಸೇರಿದ ಎನ್ಎಲ್ 01 ಬಿ 3358 ನೋಂದಣಿ ಸಂಖ್ಯೆಯ ಬಸ್ ಎನ್ನಲಾಗಿದೆ.
ಬಸ್ ಕೆಟ್ಟು ನಿಂತ ಬಳಿಕ ಚಾಲಕ ದುರಸ್ತಿ ನೆಪದಲ್ಲಿ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ದಾನೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಬಸ್ ದುರಸ್ತಿಯಾಗುವವರೆಗೂ ಕಾಯಬೇಕಾದ ಪರಿಸ್ಥಿತಿ ಎದುರಾಗಿದ್ದರೂ, ಟ್ರಾವೆಲ್ಸ್ ಸಂಸ್ಥೆ ಪರ್ಯಾಯ ವಾಹನದ ವ್ಯವಸ್ಥೆ ಮಾಡಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
ರಾತ್ರಿ ವೇಳೆ ಮಹಿಳೆಯರು ಮತ್ತು ಮಕ್ಕಳು ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ. ಕೊನೆಗೆ ರಾತ್ರಿ ಸುಮಾರು 2 ಗಂಟೆಗೆ ಪ್ರಯಾಣಿಕರೇ ಕ್ಯಾಬ್ಗಳನ್ನು ಬುಕ್ ಮಾಡಿಕೊಂಡು ಬೆಂಗಳೂರಿಗೆ ತೆರಳಿದ್ದಾರೆ.
ಟಿಕೆಟ್ಗೆ ಹಣ ಪಾವತಿಸಿದ್ದರೂ ಸಮರ್ಪಕ ಸೇವೆ ನೀಡದ ಕುಕ್ಕೇಶ್ರೀ ಟ್ರಾವೆಲ್ಸ್ ಹಾಗೂ ಸ್ಟ್ರೀಮ್ಲೈನ್ ಟೂರ್ಸ್ ಮತ್ತು ಟ್ರಾವೆಲ್ಸ್ ವಿರುದ್ಧ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರಾದ ಶೃತಿ, ಸುಮತಿ, ರಾಜು ಮತ್ತು ಉಬೇದ್ ಅವರು ಚಾಲಕ ಹಾಗೂ ಬಸ್ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ತುರ್ತು ಸಂದರ್ಭದಲ್ಲಿ ಪರ್ಯಾಯ ವಾಹನದ ವ್ಯವಸ್ಥೆ ಕಲ್ಪಿಸಬೇಕಾದ ಖಾಸಗಿ ಬಸ್ ಸಂಸ್ಥೆಗಳ ನಿರ್ಲಕ್ಷ್ಯದಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.









