ನವದೆಹಲಿ: ಬಿಸ್ಲೆರಿ ಕುಡಿಯುವ ನೀರಿನ ಗುಣಮಟ್ಟದ ಕುರಿತು ಎದ್ದಿರುವ ವಿವಾದಕ್ಕೆ ಕಂಪನಿ ಸ್ಪಷ್ಟನೆ ನೀಡಿದೆ.
ನಮ್ಮ ಉತ್ಪನ್ನಗಳು ಕುಡಿಯಲು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಬಿಸ್ಲೆರಿ ತಿಳಿಸಿದೆ.
ಇತ್ತೀಚೆಗೆ ಬಿಸ್ಲೆರಿ ನೀರಿನ ಮಾದರಿಯಲ್ಲಿ ಗುಣಮಟ್ಟದ ನಿಯಮ ಉಲ್ಲಂಘನೆಯಾಗಿರುವ ಆರೋಪದ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಾನೂನು ಕ್ರಮಕ್ಕೆ ಅನುಮತಿ ನೀಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಕಂಪನಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ನಮ್ಮಲ್ಲಿ ಕಟ್ಟುನಿಟ್ಟಾದ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯಿದೆ. ಸ್ವತಂತ್ರ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯ ಪ್ರಕಾರ ನೀರಿನಲ್ಲಿರುವ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಯೊಳಗಿದೆ. ಕುಡಿಯುವ ನೀರಿನ ಸುರಕ್ಷತೆಗೆ ಕಂಪನಿ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಎಫ್ಎಸ್ಎಸ್ಎಐ ನಡೆಸುವ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.
2025ರ ಸೆಪ್ಟೆಂಬರ್ನಲ್ಲಿ ಗೋವಾದಲ್ಲಿರುವ ಘಟಕದಲ್ಲಿ ತಯಾರಾದ ನೀರಿನ ಬ್ಯಾಚ್ಗೆ ಸಂಬಂಧಿಸಿದಂತೆ ಈ ವಿವಾದ ಉಂಟಾಗಿದೆ. ಪ್ರತಿ ಲೀಟರ್ ನೀರಿನಲ್ಲಿ ಬ್ರೋಮೇಟ್ ಪ್ರಮಾಣ ಗರಿಷ್ಠ 10 ಮೈಕ್ರೋಗ್ರಾಂ ಇರಬೇಕಾದರೆ, ಆರಂಭಿಕ ಪರೀಕ್ಷೆಯಲ್ಲಿ 12 ಮೈಕ್ರೋಗ್ರಾಂ ದಾಖಲಾಗಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸ್ವತಂತ್ರ ಪ್ರಯೋಗಾಲಯದಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಿ, ಅದರ ವರದಿಯನ್ನು ಎಫ್ಎಸ್ಎಸ್ಎಐಗೆ ಸಲ್ಲಿಸಿರುವುದಾಗಿ ಬಿಸ್ಲೆರಿ ಕಂಪನಿ ಸ್ಪಷ್ಟಪಡಿಸಿದೆ.









