ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ನಕಲಿ ಔಷಧ ದಂಧೆ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಬಾಬು ಇದೀಗ ದೆಹಲಿ ಪೊಲೀಸರ ವಶದಲ್ಲಿದ್ದಾನೆ.
ಈಗಾಗಲೇ ಕರ್ನಾಟಕದ ವಿಶೇಷ ತನಿಖಾ ತಂಡ (SIT) ಆತನನ್ನು ಬಂಧಿಸಿತ್ತು. ಇದೀಗ ದೆಹಲಿಯ ಮೋತಿಬಾಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 2 ಕೋಟಿ ರೂಪಾಯಿ ವಂಚನೆ ಪ್ರಕರಣದ ತನಿಖೆಗಾಗಿ ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆಯಲಾಗಿದೆ.
ಈ ನಡುವೆ, ನಕಲಿ ಔಷಧ ಜಾಲದ ಮತ್ತಷ್ಟು ಅಕ್ರಮಗಳು ತನಿಖೆಯಲ್ಲಿ ಬಯಲಾಗುತ್ತಿವೆ. ಕ್ಯಾನ್ಸರ್ ರೋಗಿಗಳಿಗೆ ಕಂಪನಿಯಿಂದ ಉಚಿತವಾಗಿ ಸಿಗಬೇಕಿದ್ದ ಇಂಜೆಕ್ಷನ್ಗಳನ್ನೂ ಹಣ ಪಡೆದು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ಉಚಿತ ಇಂಜೆಕ್ಷನ್ಗಳ ಮಾರಾಟದಿಂದಲೂ ಅಕ್ರಮ ಲಾಭ!
ಕ್ಯಾನ್ಸರ್ ಔಷಧ ಖರೀದಿಯಲ್ಲಿ ಕಂಪನಿಯೊಂದು ವಿಶೇಷ ಕೊಡುಗೆ ನೀಡುತ್ತಿತ್ತು. ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಎರಡು ಇಂಜೆಕ್ಷನ್ಗಳನ್ನು ಖರೀದಿಸಿದರೆ ಮತ್ತೊಂದು ಇಂಜೆಕ್ಷನ್ ಉಚಿತವಾಗಿ ನೀಡಲಾಗುತ್ತಿತ್ತು. ಆದರೆ ಈ ಕೊಡುಗೆಯ ಬಗ್ಗೆ ರೋಗಿಗಳಿಗೆ ಮಾಹಿತಿ ನೀಡದೆ, ಉಚಿತವಾಗಿ ಸಿಗುತ್ತಿದ್ದ ಇಂಜೆಕ್ಷನ್ಗಳನ್ನೂ ಪ್ರಶಾಂತ್ ಬಾಬು ಹಣಕ್ಕೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಇಷ್ಟೇ ಅಲ್ಲ, ಇಂಜೆಕ್ಷನ್ ಬಳಸಿದ ಬಳಿಕ ರೋಗಿ ಮೃತಪಟ್ಟರೆ ಅವರ ಬಳಿ ಉಳಿದಿದ್ದ ಇಂಜೆಕ್ಷನ್ಗಳನ್ನು ವಾಪಸ್ ಪಡೆಯಲಾಗುತ್ತಿತ್ತು. ನಂತರ ಅವುಗಳನ್ನು ಮತ್ತೊಬ್ಬರಿಗೆ ಮೂಲ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸಲಾಗುತ್ತಿತ್ತು ಎಂಬ ಆರೋಪವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರು ರಾಜ್ಯಗಳಲ್ಲಿ ಔಷಧ ಜಾಲದ ಕಾರ್ಯಾಚರಣೆ!
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಆರು ರಾಜ್ಯಗಳಿಗೆ ಈ ಜಾಲ ವಿಸ್ತರಿಸಿತ್ತು ಎನ್ನಲಾಗಿದೆ. ಹತ್ತಾರು ಖಾಸಗಿ ಆಸ್ಪತ್ರೆಗಳು ಮತ್ತು ನೂರಾರು ಔಷಧ ಮಳಿಗೆಗಳ ಮೂಲಕ ಔಷಧಗಳನ್ನು ಪೂರೈಸಲಾಗುತ್ತಿತ್ತು. ಈ ಜಾಲದಿಂದ 15 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಔಷಧ ಸರಬರಾಜು ಮಾಡಿರುವ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಇದೀಗ ಎಷ್ಟು ಪ್ರಮಾಣದ ಇಂಜೆಕ್ಷನ್ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ? ಈ ದಂಧೆಯಲ್ಲಿ ಇನ್ನೆಷ್ಟು ಮಂದಿ ಭಾಗಿಯಾಗಿದ್ದಾರೆ? ಎಂಬುದರ ಕುರಿತು ಎಸ್ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
2 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ದೆಹಲಿ ಪೊಲೀಸರ ತನಿಖೆ:
ಔಷಧ ಪೂರೈಕೆ ಮಾಡುವುದಾಗಿ ನಂಬಿಸಿ 2 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಪ್ರಶಾಂತ್ ಬಾಬು ವಿರುದ್ಧ ದೆಹಲಿಯ ಮೋತಿಬಾಗ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗಾಗಿ ದೆಹಲಿ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಬಾಡಿ ವಾರಂಟ್ ಮೂಲಕ ಆತನನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ದೆಹಲಿ ಪೊಲೀಸರು ವಂಚನೆ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿದ್ದರೆ, ಕರ್ನಾಟಕದ ಎಸ್ಐಟಿ ತಂಡ ನಕಲಿ ಔಷಧ ದಂಧೆಯ ಹಿಂದಿರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದೆ.









