ಯಾದಗಿರಿ: ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ರೈತರ ನಿದ್ದೆಗೆಡಿಸಿದ್ದ ಅಂತಾರಾಜ್ಯ ದನಗಳ್ಳರ ಗ್ಯಾಂಗ್‌ನ್ನು ಯಾದಗಿರಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.
ದನಗಳನ್ನು ಕದ್ದು ಸ್ಕಾರ್ಪಿಯೋದಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಪೊಲೀಸರು ಸುಮಾರು 40 ಕಿ.ಮೀ ಬೆನ್ನಟ್ಟಿ ಹಿಡಿದಿದ್ದಾರೆ.
ವಡಗೇರ ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಈ ಗ್ಯಾಂಗ್ ದನಗಳನ್ನು ಕಳ್ಳತನ ಮಾಡುತ್ತಿತ್ತು ಎನ್ನಲಾಗಿದೆ. ಮನೆಗಳ ಮುಂದೆ ಹಾಗೂ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನಗಳಿಗೆ ಅರಿವಳಿಕೆ ಇಂಜೆಕ್ಷನ್ ನೀಡಿ, ಅವು ಪ್ರಜ್ಞೆ ತಪ್ಪಿದ ಬಳಿಕ ಸ್ಕಾರ್ಪಿಯೋ ವಾಹನದಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ದ ದನಗಳನ್ನು ಕಸಾಯಿಖಾನೆಗಳಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಪೊಲೀಸರನ್ನು ಕಂಡು ವೇಗವಾಗಿ ಪರಾರಿ:
ಕಲಬುರಗಿಯಲ್ಲಿ ತಾತ್ಕಾಲಿಕವಾಗಿ ವಾಸವಿದ್ದ ಗ್ಯಾಂಗ್, ಮತ್ತೊಂದು ದನವನ್ನು ಕದ್ದು ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ಪರಾರಿಯಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ವಡಗೇರ ಹಾಗೂ ಯಾದಗಿರಿ ಗ್ರಾಮಾಂತರ ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದರು.
ಪೊಲೀಸರು ವಾಹನವನ್ನು ಬೆನ್ನಟ್ಟಿದರೂ ಆರೋಪಿಗಳು ಸ್ಕಾರ್ಪಿಯೋ ನಿಲ್ಲಿಸದೆ ವೇಗವಾಗಿ ಸಾಗುತ್ತಿದ್ದರು. ಕೊನೆಗೆ ಯಾದಗಿರಿ ತಾಲೂಕಿನ ಯರಗೋಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ರಸ್ತೆಗೆ ಅಡ್ಡಲಾಗಿ ಜೆಸಿಬಿ ಹಾಗೂ ಟ್ರ್ಯಾಕ್ಟರ್ ನಿಲ್ಲಿಸಿದರು.
ವೇಗವಾಗಿ ಬಂದ ಸ್ಕಾರ್ಪಿಯೋ ನಿಯಂತ್ರಣ ತಪ್ಪಿ ಜೆಸಿಬಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನ ಜಖಂಗೊಂಡಿದ್ದು, ಆರೋಪಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಹರಿಯಾಣ ಮೂಲದ ಸಮೂನ್, ಅನಿಬ್, ಇರ್ಷಾದ್, ನಪೀಸ್, ಅಜೀಮ್ ಹಾಗೂ ರಾಜಸ್ಥಾನ ಮೂಲದ ನಿತಿನ್ ಎಂದು ಗುರುತಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ರೈತರಿಗೆ ತೊಂದರೆ ನೀಡುತ್ತಿದ್ದ ದನಗಳ್ಳರ ಗ್ಯಾಂಗ್‌ನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



