ಹಾಸನ: ರೈಲು ಹತ್ತುವ ವೇಳೆ ಕಾಲು ಜಾರಿ ಹಳಿ ಮೇಲೆ ಬಿದ್ದ ವ್ಯಕ್ತಿಯೊಬ್ಬರು ಚಕ್ರಗಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹೊಳೆನರಸೀಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಮೃತರನ್ನು ಹೊಳೆನರಸೀಪುರ ತಾಲೂಕಿನ ಕೆ.ಮುದ್ದನಹಳ್ಳಿ ಗ್ರಾಮದ ನಾಗರಾಜು (48) ಎಂದು ಗುರುತಿಸಲಾಗಿದೆ. ಬೆಂಗಳೂರಿಗೆ ತೆರಳಲು ನಾಗರಾಜು ನಿಲ್ದಾಣಕ್ಕೆ ಬಂದಿದ್ದರು.
ರೈಲು ಹೊರಡಲು ಆರಂಭಿಸಿದ ಸಂದರ್ಭದಲ್ಲಿ ರೈಲು ಹತ್ತಲು ನಾಗರಾಜು ಪ್ರಯತ್ನಿಸಿದ್ದಾರೆ. ಈ ವೇಳೆ ಏಕಾಏಕಿ ಕಾಲು ಜಾರಿ ಹಳಿ ಮೇಲೆ ಬಿದ್ದಿದ್ದಾರೆ. ತಕ್ಷಣವೇ ಚಲಿಸುತ್ತಿದ್ದ ರೈಲು ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಂಡಿದ್ದಾರೆ.



