ಉಡುಪಿ, ಆ.24: ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದಲ್ಲಿ ಬಂಧಿತ ಮುಂಬೈ ಗ್ಯಾಂಗ್ಸ್ಟರ್ ಅನುಜ್ ಪಾಟೀಲ್ ಪೊಲೀಸ್ ಸಿಬ್ಬಂದಿಯ ಮೇಲೆಯೇ ದಾಳಿ ನಡೆಸಿ ಪಿಸ್ತೂಲ್ ಕಸಿದುಕೊಂಡು ಪ್ರತಿದಾಳಿ ನಡೆಸಲು ಯತ್ನಿಸಿದ ಘಟನೆ ನಡೆದಿದೆ. ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದು, ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಗಸ್ಟ್ 7ರಂದು ಮುದರಂಗಡಿಯಲ್ಲಿ ಪ್ರಿನ್ಸ್ ಎಂಟರ್ಪ್ರೈಸಸ್ ಮಾಲೀಕ ಡೇವಿಡ್ ಡಿಸೋಜಾ ಅವರನ್ನು ಬೈಕ್ನಲ್ಲಿ ಬಂದಿದ್ದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಹಂತಕರ ಪೈಕಿ ಓರ್ವ ಡೇವಿಡ್ ಅವರ ತಲೆಗೆ ಹತ್ತಿರದಿಂದ ಪಿಸ್ತೂಲ್ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದ.
ಪ್ರಕರಣದ ತನಿಖೆ ನಡೆಸುತ್ತಿದ್ದ ಉಡುಪಿ ಪೊಲೀಸರು ಹತ್ಯೆಯ ಹಿಂದಿನ ಸಂಚು ಹಾಗೂ ಶೂಟರ್ಗಳ ಜಾಲದ ಬಗ್ಗೆ ತನಿಖೆ ನಡೆಸಿದ್ದು, ಮುಂಬೈ ಮೂಲದ ಅನುಜ್ ಪಾಟೀಲ್ ಪ್ರಮುಖ ಆರೋಪಿಯಾಗಿ ಪತ್ತೆಯಾಗಿದ್ದಾನೆ. ಡೇವಿಡ್ ಹತ್ಯೆಗಾಗಿ ಮೂವರು ಶೂಟರ್ಗಳನ್ನು ಕಳುಹಿಸಿದ್ದ ಆರೋಪದ ಮೇಲೆ ಆತನನ್ನು ಮುಂಬೈನಲ್ಲಿ ಬಂಧಿಸಲಾಗಿದೆ.
ಕುಂದಾಪುರ ಠಾಣೆಯ ಎಸ್ಐ ನಂಜ ನಾಯಕ್, ಕೊಲ್ಲೂರು ಠಾಣೆಯ ಎಸ್ಐ ವಿನಯ್ ಹಾಗೂ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಅನುಜ್ ಪಾಟೀಲ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಆದರೆ ಬಂಧಿತನನ್ನು ಉಡುಪಿಗೆ ಕರೆತರುವ ಮಾರ್ಗಮಧ್ಯೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಪಿಎಸ್ಐ ವಿನಯ್ ಅವರ ಬಳಿಯಿದ್ದ ಪಿಸ್ತೂಲ್ ಕಸಿದುಕೊಂಡು ಪೊಲೀಸರ ವಿರುದ್ಧವೇ ಬಳಸಲು ಯತ್ನಿಸಿದ ಸಂದರ್ಭದಲ್ಲಿ ಪಿಎಸ್ಐ ನಂಜ ನಾಯಕ್ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.
ಕಾಲಿಗೆ ಗುಂಡೇಟು ತಗುಲಿದ ಅನುಜ್ ಪಾಟೀಲ್ನನ್ನು ತಕ್ಷಣ ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಅನುಜ್ ಪಾಟೀಲ್ 2017ರಿಂದ ತಲೆಮರೆಸಿಕೊಂಡು ಮುಂಬೈನಲ್ಲಿ ಕಾರ್ಯಾಚರಿಸುತ್ತಿದ್ದ. ಆತನ ವಿರುದ್ಧ ಮಹಾರಾಷ್ಟ್ರದಲ್ಲಿ MCOCA ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಒಟ್ಟು 11 ಕ್ರಿಮಿನಲ್ ಪ್ರಕರಣಗಳು ಆತನ ವಿರುದ್ಧ ಇವೆ.
ಈ ಪೈಕಿ 10 ಪ್ರಕರಣಗಳು ಶಸ್ತ್ರಾಸ್ತ್ರ ಕಾಯ್ದೆಗೆ ಸಂಬಂಧಿಸಿದ್ದಾಗಿವೆ. ಮಹಾರಾಷ್ಟ್ರದಲ್ಲಿ ನಾಲ್ಕು, ಗುಜರಾತ್ನಲ್ಲಿ ಐದು, ದಮನ್ ಮತ್ತು ದಿಯುನಲ್ಲಿ ಒಂದು ಹಾಗೂ ಕರ್ನಾಟಕದಲ್ಲಿ ಒಂದು ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.



