ಬಾಗಲಕೋಟೆ: ಅಡುಗೆ ಅನಿಲ ಸೋರಿಕೆಯಾಗಿ ಮನೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ 67 ವರ್ಷದ ವೃದ್ಧೆಯೊಬ್ಬರು ಗಾಯಗೊಂಡಿರುವ ಘಟನೆ ಜಮಖಂಡಿಯ ಚೌಡಯ್ಯನಗರದ ಮಾವಿನ ಮಸಾರಿ ಬಡಾವಣೆಯಲ್ಲಿ ನಡೆದಿದೆ.
ಲಕ್ಷ್ಮೀಬಾಯಿ ಪತ್ತಾರ (67) ಗಾಯಗೊಂಡವರು. ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದು, ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಮನೆಯಲ್ಲಿದ್ದ ಲಕ್ಷ್ಮೀಬಾಯಿ ಅವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.
ಘಟನೆ ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಜಮಖಂಡಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಬಳಿಕ ಗಾಯಗೊಂಡ ಲಕ್ಷ್ಮೀಬಾಯಿ ಅವರನ್ನು ರಕ್ಷಿಸಿ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಮನೆಯ ಇತರೆ ಭಾಗಗಳಿಗೆ ಹರಡುವ ಮುನ್ನವೇ ನಿಯಂತ್ರಣಕ್ಕೆ ಬಂದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.



