ಪಾಲಾ-ಬಾದಾಮಿ ರಸ್ತೆ ಕಾಯಕಲ್ಪಕ್ಕೆ ಕೂಡಿ ಬಂದ ಕಾಲ; ರಸ್ತೆಗಳ ಡಾಂಬರೀಕರಣಕ್ಕೆ ಹಣದ ಹೊಳೆ

Vijayasakshi (Gadag News) :

ರಸ್ತೆ ಮರು ಡಾಂಬರೀಕರಣ, ಸುಧಾರಣಾ ಕಾಮಗಾರಿ ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಅನುಮೋದನೆ | ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಅಭಿನಂದನೆ

ರಸ್ತೆ ಅಭಿವೃದ್ಧಿಗೆ ೧೨ ಕೋಟಿ ಮಂಜೂರು

ವಿಜಯಸಾಕ್ಷಿ ಸುದ್ದಿ, ಗದಗ:

ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಗದಗ ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಣದ ಹೊಳೆ ಹರಿಸುತ್ತಿದೆ. ಗದಗ ವಿಧಾನಸಭಾ ಮತಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಕೇಳಿದಷ್ಟು ಅನುದಾನ ಕೊಡುತ್ತಿದ್ದು, ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರ ಕನಸಿಗೆ ನೀರೆರೆಯುತ್ತಿದ್ದಾರೆ.

ಹೌದು, ಗದಗ ಮತಕ್ಷೇತ್ರದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ೧೨.೬೦ ಕೋಟಿ ರೂ. ಮಂಜೂರು ಮಾಡಿದ್ದು, ಗದಗ-ಬೆಟಗೇರಿ ಅವಳಿ ನಗರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಿ.ಸಿ.ಪಾಟೀಲರಿಗೆ ಅನಿಲ್ ಮೆಣಸಿನಕಾಯಿ ಅಭಿನಂದನೆ ತಿಳಿಸಿದ್ದಾರೆ.

ಗದಗ ತಾಲ್ಲೂಕಿನ ಕಾರವಾರ ಇಳಕಲ್ ರಾಜ್ಯ ಹೆದ್ದಾರಿ-06 ರಸ್ತೆಯ ಆಯ್ದ ಭಾಗಗಳಲ್ಲಿ ಮರು ಡಾಂಬರೀಕರಣ ಹಾಗೂ ಎನ್‌ಎಚ್-63ದಿಂದ ಗದಗ ಮುಂಡರಗಿ 1.30 ಕಿ.ಮೀ.ವರೆಗಿನ ರಸ್ತೆ ಸುಧಾರಣೆ ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಅನುಮೋದನೆ ನೀಡಿದೆ.

ಸುಮಾರು 3.60 ಕೋಟಿ ರೂ. ವೆಚ್ಚದಲ್ಲಿ ಕಾರವಾರ-ಇಳಕಲ್ ರಾಜ್ಯ ಹೆದ್ದಾರಿಯ ಗದಗ ಬೆಟಗೇರಿ ಅವಳಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದಿಂದ ಭೂಮರೆಡ್ಡಿ ಸರ್ಕಲ್‌ವರೆಗೆ ಹಾಗೂ ತುಳಜಾಭವಾನಿ ಸರ್ಕಲ್‌ನಿಂದ ನರಸಾಪೂರದವರೆಗೆ ಮರು ಡಾಂಬರೀಕರಣ ಕಾಮಗಾರಿ ಕೈಗೊಳ್ಳಲು ಪಿಡಬ್ಲ್ಯೂಡಿ ಇಲಾಖೆ ಸಮ್ಮತಿಸಿದೆ.

ಅದರಂತೆ, ಗದಗ-ಮುಂಡರಗಿ 1.30 ಕಿ.ಮೀ.ವರೆಗಿನ ರಸ್ತೆ ಸುಧಾರಣೆಗೆ 9 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಕಳೆದ ಎರಡ್ಮೂರು ತಿಂಗಳ ಹಿಂದೆಯಷ್ಟೇ ರಾಜ್ಯ ಸರ್ಕಾರ ಗದಗ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 1,306.5 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಮೂಲಕ ಗದಗ ಮತಕ್ಷೇತ್ರಕ್ಕೆ ಭರಪೂರ ಕೊಡುಗೆ ನೀಡಿತ್ತು. ಇದಕ್ಕಾಗಿ ಮುಖಂಡ ಅನೀಲ್ ಮೆಣಸಿನಕಾಯಿ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನಾ ಸಮಾರಂಭವನ್ನೂ ಏರ್ಪಡಿಸಿತ್ತು. ಇದಾದ ಬೆನ್ನಲ್ಲೇ ಗದಗನ ರಸ್ತೆಗಳ ಅಭ್ಯುದಯಕ್ಕಾಗಿ 12.60 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಕೈಗೊಳ್ಳಲು ಅನುಮೋದಿಸಿರುವುದು ಕ್ಷೇತ್ರದ ಜನರಿಗೆ, ಬಿಜೆಪಿ ಕಾರ್ಯಕರ್ತರಿಗೆ ಸಂತಸವನ್ನುಂಟು ಮಾಡಿದೆ.

ಶಾಶ್ವತ ಪರಿಹಾರ ಸಿಗಬಹುದೇ?

ಕಳೆದ ಹಲವು ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರದ ಮಧ್ಯೆ ಭಾಗದಲ್ಲಿರುವ ಪಾಲಾ ಬಾದಾಮಿ ರಸ್ತೆ ದುರಸ್ತಿ ಕೈಗೊಳ್ಳಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಈ ರಸ್ತೆಯನ್ನು ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು ಆಗಮಿಸುವ ವೇಳೆ ಹಲವು ಬಾರಿ ಅಭಿವೃದ್ಧಿಗೊಳಿಸಿದ್ದರೂ ವಾಹನ ದಟ್ಟಣೆ, ಕಳಪೆ ಕಾಮಗಾರಿಯಿಂದಾಗಿ ರಸ್ತೆ ಕಿತ್ತು ಹೋಗಿದೆ. ಇದರಿಂದಾಗಿ ಹಳೇ ಡಿಸಿ ಆಫೀಸ್ ಸರ್ಕಲ್‌ನಿಂದ ಗದಗ ತಹಸೀಲ್ದಾರ್ ಕಚೇರಿವರೆಗೆ ಗುಂಡಿಗಳಿಂದ, ಧೂಳಿನಿಂದ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಇದೀಗ ಇದೇ ರಸ್ತೆಯ ಮರು ಡಾಂಬರೀಕರಣಕ್ಕೆ ಅನುದಾನ ಮಂಜೂರಾಗಿದ್ದು, ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದೆಂಬ ಆಶಾಭಾವನೆ ಅವಳಿ ನಗರದ ಜನರದ್ದಾಗಿದೆ.

ಗದಗ ಮತಕ್ಷೇತ್ರದ ಅಭಿವೃದ್ಧಿಗೆ ಸಚಿವ ಸಿ.ಸಿ.ಪಾಟೀಲ, ಸಂಸದ ಶಿವಕುಮಾರ್ ಉದಾಸಿ, ಶಾಸಕ ಕಳಕಪ್ಪ ಬಂಡಿಯವರು ಸಾಕಷ್ಟು ಅನುದಾನ ನೀಡಿದ್ದು, ಅವರಿಗೆ ಅಭಿನಂದನೆಗಳು. ಇವರೆಲ್ಲರ ಸಹಕಾರದಿಂದ ಮುಂಬರುವ ದಿನಗಳಲ್ಲಿ ಗದಗ ವಿಧಾನಸಭಾ ಕ್ಷೇತ್ರದ ಚಿತ್ರಣ ಬದಲಾಗಲಿದೆ.

ಅನಿಲ್ ಮೆಣಸಿನಕಾಯಿ, ಬಿಜೆಪಿ ಯುವ ಮುಖಂಡ

ಗದಗ-ಬೆಟಗೇರಿ ಅವಳಿ ನಗರದ ಅಭ್ಯುದಯಕ್ಕಾಗಿ ಜಿಲ್ಲೆಯ ಸಚಿವರು, ಪಕ್ಷದ ಶಾಸಕರು ಮುತುವರ್ಜಿ ವಹಿಸಿ ಅನುದಾನ ನೀಡುತ್ತಿರುವುದು ಬಹಳಷ್ಟು ಸಂತಸ ತಂದಿದೆ. ಅಲ್ಲದೆ, ಅವಳಿ ನಗರದ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಅನಿಲ್ ಮೆಣಸಿನಕಾಯಿ ಅವರ ಕಾರ್ಯ ಶ್ಲಾಘನೀಯ.

ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯ
ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ