ವಿಜಯಸಾಕ್ಷಿ ಸುದ್ದಿ, ಮುಳಗುಂದ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕ್ರೀಡೆಯಿಂದ ಶಿಸ್ತು, ಸಮಯಪ್ರಜ್ಞೆ, ನಾಯಕತ್ವ ಗುಣ ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ ಎಂದು ನಾಗರಾಜ ದೇಶಪಾಂಡೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆ (ಆರ್ಎಂಎಸ್ಎ) ಆವರಣದಲ್ಲಿ ಜಿಪಂ, ತಾಪಂ ಗದಗ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ ಸಹಯೋಗದಲ್ಲಿ ಸೋಮವಾರ ನಡೆದ 2026-27ನೇ ಸಾಲಿನ ಪ್ರೌಢಶಾಲೆಗಳ ಮುಳಗುಂದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕ್ರೀಡೆ ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ಸ್ಥೈರ್ಯವನ್ನು ಬೆಳೆಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜವಾಗಿದ್ದು, ವಿದ್ಯಾರ್ಥಿಗಳು ಗೆಲುವಿನಿಂದ ಅಹಂಕಾರಪಡದೆ, ಸೋಲಿನಿಂದ ನಿರಾಶರಾಗದೆ ಮುಂದಿನ ಅವಕಾಶಕ್ಕಾಗಿ ಸಿದ್ಧರಾಗಬೇಕು ಎಂದರು.
ಬಸವರಾಜ ಸುಂಕಾಪೂರ ಮಾತನಾಡಿ, ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ದೊಡ್ಡ ಸಾಧನೆ. ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಕಡಿಮೆ ಮಾಡಿ, ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ಮೀಸಲಿಡಬೇಕು ಎಂದರು.
ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರ ಮೇಲಿದೆ. ಗ್ರಾಮೀಣ ವಿದ್ಯಾರ್ಥಿಗಳಲ್ಲಿಯೂ ಕ್ರೀಡಾ ಪ್ರತಿಭೆ ಸಾಕಷ್ಟಿದ್ದು, ಸೂಕ್ತ ತರಬೇತಿ ಹಾಗೂ ಅವಕಾಶ ದೊರೆತರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಲ್ಲರು. ವಿದ್ಯಾರ್ಥಿಗಳು ನಿರಂತರ ಪ್ರಯತ್ನ ಹಾಗೂ ಪರಿಶ್ರಮದೊಂದಿಗೆ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಚ್. ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ, ಮುಳಗುಂದ ಪಟ್ಟಣದ ಮುಖಂಡರು ಕ್ರೀಡೆಗಳಿಗೆ ಸಾಕಷ್ಟು ಸಹಾಯ-ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯರಾದ ಎಂ.ಡಿ. ಬಟ್ಟೂರ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಸಾಧಕರು ಹಾಗೂ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮಾದೇವಪ್ಪ ಮಾನೇಗರ ಅಧ್ಯಕ್ಷತೆ ವಹಿಸಿದ್ದರು.
ಹಿರಿಯರಾದ ಅಶೋಕ ಸೊನಗೋಜಿ, ಶಿವಶಿಂಪರ, ಎಸ್.ಸಿ. ಅಮರಶೆಟ್ಟರ, ವಿಜಯ ನೀಲಗುಂದ, ಸಂಜಯ ನೀಲಗುಂದ, ಅಶೋಕ ಹುಣಸಿಮರದ, ಬಸವರಾಜ ಹಾರೋಗೇರಿ, ಮಹಾದೇವಪ್ಪ ಗಡಾದ, ಇಮಾಮಸಾಬ ಶೇಖ, ಮಹಾಂತಪ್ಪ ನೀಲಗುಂದ, ದೈಹಿಕ ಶಿಕ್ಷಕ ವಿ.ಟಿ. ಅಂಗಡಿ, ನೂರಹ್ಮದ ನದಾಫ್ ಸೇರಿದಂತೆ ಮುಳಗುಂದ ವಲಯದ ಪ್ರೌಢಶಾಲೆಗಳ ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಗೆಲುವಿನಿಂದ ಅಹಂಕಾರ ಪಡದೆ, ಸೋಲಿನಿಂದ ನಿರಾಶರಾಗದೆ ಮುಂದಿನ ಅವಕಾಶಕ್ಕಾಗಿ ಸಿದ್ಧರಾಗಬೇಕು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಿ ಕ್ರೀಡೆಗೆ ಹೆಚ್ಚಿನ ಸಮಯ ನೀಡಬೇಕು.
— ಬಸವರಾಜ ಸುಂಕಾಪೂರ



