ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದಲ್ಲಿ ತರಕಾರಿ ಬೆಲೆಗಳು ನಿಧಾನವಾಗಿ ಏರಿಕೆಯಾಗುತ್ತಿವೆ.
30-40 ರೂ.ಗೆ ಸಿಗುತ್ತಿದ್ದ ಹಲವು ತರಕಾರಿಗಳ ದರ ಇದೀಗ 60-80 ರೂ.ಗೆ ತಲುಪಿದ್ದು, ಗ್ರಾಹಕರ ಜೇಬಿಗೆ ಹೊರೆ ಹೆಚ್ಚಾಗಿದೆ. ಬೆಲೆ ಏರಿಕೆಯಿಂದ ತರಕಾರಿ ಖರೀದಿ ಪ್ರಮಾಣವೂ ಕಡಿಮೆಯಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಹೋಲ್ಸೇಲ್ ಹಾಗೂ ರಿಟೇಲ್ ಮಾರುಕಟ್ಟೆಯಲ್ಲಿ ತರಕಾರಿಗಳ ದರ ಹೀಗಿದೆ:
- ಶುಂಠಿ: ₹120–130
- ಬೆಳ್ಳುಳ್ಳಿ: ₹230–250
- ಬೀನ್ಸ್: ₹100–110
- ಹಸಿಬಟಾಣಿ: ₹80–90
- ಹಸಿಮೆಣಸಿನಕಾಯಿ: ₹80–90
- ಈರುಳ್ಳಿ: ₹50–70
- ನುಗ್ಗೆಕಾಯಿ: ₹90–100
- ಟೊಮೇಟೊ: ₹25–30
- ಕ್ಯಾರೆಟ್: ₹60–70
- ಬೀಟ್ರೂಟ್: ₹60–70
- ಕ್ಯಾಪ್ಸಿಕಂ: ₹70–80
- ಹೀರೆಕಾಯಿ: ₹60–80
- ಬೆಂಡೆಕಾಯಿ: ₹50–60
- ಬದನೆಕಾಯಿ: ₹50–60
- ಹಾಗಲಕಾಯಿ: ₹40–50
- ಹೂಕೋಸು: ₹40–50
- ಎಲೆಕೋಸು: ₹50–60
- ಮೂಲಂಗಿ: ₹40–50
ಒಂದು ಕೆಜಿ ಬದಲು ಅರ್ಧ ಕೆಜಿ ಖರೀದಿ:
ತರಕಾರಿ ಬೆಲೆ ಹೆಚ್ಚಳದಿಂದ ಗ್ರಾಹಕರು ಒಂದು ಕೆಜಿ ಖರೀದಿಸುವ ಬದಲು ಅರ್ಧ ಕೆಜಿ ಅಥವಾ ಕಾಲು ಕೆಜಿಗೆ ಸೀಮಿತವಾಗುತ್ತಿದ್ದಾರೆ. ದಿನನಿತ್ಯದ ಅಡುಗೆಗೆ ತರಕಾರಿ ಅಗತ್ಯವಿದ್ದರೂ, ಬೆಲೆ ಹೆಚ್ಚಿರುವುದರಿಂದ ಖರೀದಿಸಲು ಕಷ್ಟವಾಗುತ್ತಿದೆ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.
ಮನೆ ಸಮೀಪದ ತರಕಾರಿ ಅಂಗಡಿಗಳಿಗಿಂತ ಕೆ.ಆರ್. ಮಾರುಕಟ್ಟೆಯಲ್ಲಿ ಕೆಲವು ತರಕಾರಿಗಳು ಕಡಿಮೆ ಬೆಲೆಗೆ ಸಿಗುತ್ತಿವೆ. ಹೀಗಾಗಿ ತಾಜಾ ತರಕಾರಿ ಕಡಿಮೆ ದರದಲ್ಲಿ ಸಿಗುತ್ತದೆ ಎಂಬ ಕಾರಣಕ್ಕೆ ದೂರದಿಂದಲೂ ಗ್ರಾಹಕರು ಕೆ.ಆರ್. ಮಾರುಕಟ್ಟೆಗೆ ಬರುತ್ತಿದ್ದಾರೆ.
ರೈತರು ಮತ್ತು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ:
ಮುಂಗಾರು ಮಳೆಯಲ್ಲಿನ ವ್ಯತ್ಯಾಸದಿಂದ ತರಕಾರಿ ಬೆಳೆ ಮೇಲೆ ಪರಿಣಾಮ ಬೀರಿದ್ದು, ಮಾರುಕಟ್ಟೆಗೆ ಪೂರೈಕೆ ಕಡಿಮೆಯಾದರೆ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಕೆಲವು ತರಕಾರಿಗಳ ಬೆಲೆ ₹100ರ ಗಡಿ ತಲುಪಿದ್ದು, ಬೆಲೆ ಏರಿಕೆ ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.
ಒಟ್ಟಿನಲ್ಲಿ ತರಕಾರಿ ಬೆಲೆ ಏರಿಕೆಯಿಂದ ಒಂದೆಡೆ ರೈತರು ಸಂಕಷ್ಟದಲ್ಲಿದ್ದರೆ, ಮತ್ತೊಂದೆಡೆ ಗ್ರಾಹಕರು ಹೆಚ್ಚಿದ ದರಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.



