ಚನ್ನಪಟ್ಟಣ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನೇರಳೂರು ಗ್ರಾಮದ ಕಬ್ಬಿನ ತೋಟದಲ್ಲಿ ನಾಲ್ಕು ಜೀವಂತ ಚಿರತೆ ಮರಿಗಳು ಪತ್ತೆಯಾಗಿವೆ.
ಗ್ರಾಮದ ನಾಗೇಶ್ ಎಂಬುವವರಿಗೆ ಸೇರಿದ ಕಬ್ಬಿನ ತೋಟದಲ್ಲಿ ಕೂಲಿ ಕಾರ್ಮಿಕರು ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಚಿರತೆ ಮರಿಗಳು ಕಾಣಿಸಿಕೊಂಡಿವೆ. ಪತ್ತೆಯಾದ ನಾಲ್ಕೂ ಮರಿಗಳು ಕೇವಲ 4ರಿಂದ 5 ದಿನಗಳ ಹಿಂದೆ ಜನಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಕಬ್ಬಿನ ದಟ್ಟವಾದ ಬೆಳೆಯನ್ನು ಸುರಕ್ಷಿತ ತಾಣವೆಂದು ಭಾವಿಸಿ ತಾಯಿ ಚಿರತೆ ಇಲ್ಲಿ ಮರಿಗಳಿಗೆ ಜನ್ಮ ನೀಡಿರಬಹುದು ಎಂದು ಶಂಕಿಸಲಾಗಿದೆ. ಮರಿಗಳು ಪತ್ತೆಯಾಗುತ್ತಿದ್ದಂತೆಯೇ ರೈತರು ಹಾಗೂ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಾಲ್ಕೂ ಚಿರತೆ ಮರಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ನಡುವೆ, ಮರಿಗಳನ್ನು ಹುಡುಕಿಕೊಂಡು ತಾಯಿ ಚಿರತೆ ಮತ್ತೆ ತೋಟ ಅಥವಾ ಗ್ರಾಮದತ್ತ ಬರುವ ಸಾಧ್ಯತೆ ಇರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ತಾಯಿ ಚಿರತೆಯನ್ನು ಬೋನು ಇರಿಸಿ ಸೆರೆಹಿಡಿದು, ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.



