ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ನವೀಕರಣಕ್ಕಾಗಿ ಬಹುವಿಧದ ಮೊಬೈಲ್ ಆ್ಯಪ್/ವೆಬ್ ಆ್ಯಪ್‌ಗಳು ಸಿದ್ಧಗೊಳ್ಳುತ್ತಿದ್ದು, ಶೀಘ್ರದಲ್ಲೇ ಗೃಹಲಕ್ಷ್ಮಿ ಫಲಾನುಭವಿಗಳ ನವೀಕರಣ ಪ್ರಕ್ರಿಯೆಗಳು ನಡೆಯಲಿವೆ.
ಗ್ಯಾರಂಟಿ ಯೋಜನೆಗಳ ಪೈಕಿ ಪ್ರಮುಖ ಯೋಜನೆಯಾಗಿರುವ ಗೃಹಲಕ್ಷ್ಮಿ, ರಾಜ್ಯದ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ. ಆದರೆ ಈ ಯೋಜನೆಯಡಿ ಅರ್ಹರಲ್ಲದವರೂ ಹಣ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ, ಇಂತಹ ಸದಸ್ಯರನ್ನು ರದ್ದುಪಡಿಸುವ ಉದ್ದೇಶದಿಂದ ಮರುನವೀಕರಣಕ್ಕೆ ಸರ್ಕಾರ ಮುಂದಾಗಿದೆ. ನವೀಕರಣದ ವೇಳೆ ಫಲಾನುಭವಿಗಳ ಕೆಲವು ವೈಯಕ್ತಿಕ ವಿವರಗಳನ್ನೂ ಸಂಗ್ರಹಿಸಲು ನಿರ್ಧರಿಸಲಾಗಿದೆ.
ರಾಜ್ಯಾದ್ಯಂತ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಮರುಪರಿಶೀಲನೆ ಹಂತದಲ್ಲಿ ಫಲಾನುಭವಿಗಳ ಬಯೋಮೆಟ್ರಿಕ್ ಮತ್ತು ಮುಖಚಹರೆ ದೃಢೀಕರಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದೂ, ಇದೇ ಉದ್ದೇಶಕ್ಕಾಗಿ ಮೊಬೈಲ್ ಆ್ಯಪ್ ಮತ್ತು ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದ್ದು, ಅಂತಿಮ ಹಂತದ ಪರಿಶೀಲನೆ ನಡೆಯುತ್ತಿದೆ ಎಂದೂ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸರ್ಕಾರದ ನಿಯೋಜಿತ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ನವೀಕರಣ ಕಾರ್ಯ ಕೈಗೊಳ್ಳಲಿದ್ದು, ಇದರಿಂದ ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ದಟ್ಟಣೆ ತಪ್ಪಿಸಬಹುದು. ಫಲಾನುಭವಿಗಳು ಸರ್ಕಾರದ ಅಧಿಕೃತ ಕೇಂದ್ರಗಳಲ್ಲೂ ದಾಖಲೆ ಸಲ್ಲಿಸಿ ನೋಂದಣಿ ಮಾಡಿಸಬಹುದು.
ಯೋಜನೆಯಡಿ ಒಟ್ಟು 1.24 ಕೋಟಿ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ ಅರ್ಹ ಫಲಾನುಭವಿಗಳ ಖಾತೆಗೆ 32 ಕಂತುಗಳಲ್ಲಿ ತಲಾ 2,000 ರೂ.ನಂತೆ ಒಟ್ಟು 76,951 ಕೋಟಿ ರೂ. ಜಮೆ ಮಾಡಲಾಗಿದೆ. ನೋಂದಾಯಿತರ ಪೈಕಿ 3.13 ಲಕ್ಷ ಫಲಾನುಭವಿಗಳು ಮೃತಪಟ್ಟಿದ್ದು, ಇದರಲ್ಲಿ 1.10 ಲಕ್ಷ ಮಂದಿಯ ಖಾತೆಗೆ 117.31 ಕೋಟಿ ರೂ. ಜಮೆಯಾಗಿದ್ದು, ಇದನ್ನು ಹಿಂಪಡೆಯಲು ಸರ್ಕಾರ ಕ್ರಮ ಕೈಗೊಂಡಿದೆ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸದಾಗಿ ಅರ್ಜಿ ತಯಾರಿಸಿದ್ದು, ಸರ್ಕಾರ ಮತ್ತು ಹಣಕಾಸು ಇಲಾಖೆಗೆ ಸಲ್ಲಿಸಿದೆ. ಮನೆ ಯಜಮಾನಿಯ ವಿವರ, ಮತದಾರರ ಗುರುತಿನ ವಿವರ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಈ ಹಿಂದೆ ಮನೆಯಲ್ಲಿ ಎಷ್ಟು ಸದಸ್ಯರಿಗೆ ಹಣ ಬರುತ್ತಿತ್ತು, ಜಾತಿಯ ವಿವರ, ಪತಿಯ ಹೆಸರು-ಆಧಾರ್ ಸಂಖ್ಯೆ ಸೇರಿದಂತೆ ಹಲವು ಮಾಹಿತಿಗಳನ್ನು ಒಳಗೊಂಡ ಹೊಸ ಅರ್ಜಿ ನಮೂನೆ ತಯಾರಾಗುತ್ತಿದೆ.
ಈಗಾಗಲೇ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯಿಂದಾಗಿ ನಕಲಿ ಹಾಗೂ ನಿಧನರಾದವರು ಸೇರಿದಂತೆ ಲಕ್ಷಾಂತರ ಹೆಸರುಗಳನ್ನು ಕೈಬಿಡಲಾಗಿದ್ದು, ಗೃಹಲಕ್ಷ್ಮಿ ಯೋಜನೆಯ ಮರುನೋಂದಣಿಯಿಂದಲೂ ಸಾಕಷ್ಟು ಮಂದಿ ಅನರ್ಹರು ಯೋಜನೆಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಸೆಪ್ಟೆಂಬರ್ ನಂತರ ಈ ನವೀಕರಣ ಪ್ರಕ್ರಿಯೆ ನಡೆಯಲಿದೆ.



