HomeKarnataka Newsನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ 4-5 ಕೋಟಿ ಹಣ ದುರುಪಯೋಗ ಆರೋಪ: ತನಿಖೆಗೆ ಆದೇಶ!

ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ 4-5 ಕೋಟಿ ಹಣ ದುರುಪಯೋಗ ಆರೋಪ: ತನಿಖೆಗೆ ಆದೇಶ!

For Dai;y Updates Join Our whatsapp Group

ಮೈಸೂರು: ನಂಜನಗೂಡು ಪಟ್ಟಣದ ಪ್ರಸಿದ್ಧ ಶ್ರೀ ನಂಜುಂಡೇಶ್ವರ ದೇವಾಲಯದ 2024-25ನೇ ಸಾಲಿನ ಆದಾಯ-ವೆಚ್ಚದ ಲೆಕ್ಕಪತ್ರದಲ್ಲಿ ಹಣಕಾಸಿನ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಲೆಕ್ಕದಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ ದೇವಾಲಯದ ವ್ಯವಸ್ಥಾಪನ ಸಮಿತಿ ಸಭೆಯಲ್ಲಿ ಆದೇಶಿಸಲಾಗಿದೆ.

2024-25ನೇ ಸಾಲಿನಲ್ಲಿ ದೇವಾಲಯಕ್ಕೆ ₹25.86 ಕೋಟಿ ಆದಾಯ ಬಂದಿದ್ದು, ₹25.68 ಕೋಟಿ ವೆಚ್ಚವಾಗಿದೆ ಎಂದು ಲೆಕ್ಕದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಕೇವಲ ₹17.84 ಲಕ್ಷ ಉಳಿತಾಯ ಉಳಿದಿದೆ. ಹಿಂದಿನ ವರ್ಷಗಳಲ್ಲಿ ಸುಮಾರು ₹4 ಕೋಟಿಗೂ ಹೆಚ್ಚು ಉಳಿತಾಯವಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಬಾರಿ ಉಳಿತಾಯ ಪ್ರಮಾಣ ಇಷ್ಟು ಕಡಿಮೆಯಾಗಿರುವುದಕ್ಕೆ ಸ್ಥಳೀಯರು ಹಾಗೂ ರೈತ ಮುಖಂಡರು ಪ್ರಶ್ನೆ ಎತ್ತಿದ್ದಾರೆ.

ಪ್ರಸಾದ, ಲಾಡು ತಯಾರಿಕೆ ವೆಚ್ಚದ ಬಗ್ಗೆ ಅನುಮಾನ:

ದೇವಾಲಯದ ವಿವಿಧ ವೆಚ್ಚಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಒಂದೇ ಹೊತ್ತು ಪ್ರಸಾದ ವಿತರಿಸಿದ ವರ್ಷದಲ್ಲಿ ಸುಮಾರು ₹73 ಲಕ್ಷ ವೆಚ್ಚವಾಗಿದ್ದರೆ, ಮೂರು ಹೊತ್ತು ಪ್ರಸಾದ ವಿತರಿಸಿದ ವರ್ಷದಲ್ಲಿ ಕೇವಲ ₹46 ಲಕ್ಷ ವೆಚ್ಚವಾಗಿದೆ ಎಂದು ಲೆಕ್ಕದಲ್ಲಿ ಉಲ್ಲೇಖಿಸಲಾಗಿದೆ.

ಅದೇ ರೀತಿ, ಭಕ್ತರಿಂದ ಹಾಲು ಮತ್ತು ಮೊಸರು ಕೊಡುಗೆಯಾಗಿ ಬರುತ್ತಿದ್ದರೂ ₹3.18 ಲಕ್ಷ ಮೌಲ್ಯದ ಹಾಲು-ಮೊಸರು ಖರೀದಿ ಮಾಡಿರುವ ಲೆಕ್ಕದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಲಾಡು ತಯಾರಿಕೆಗೆ ₹3.50 ಕೋಟಿ, ಬಾಳೆಹಣ್ಣಿಗೆ ₹6.55 ಲಕ್ಷ, ಶಾಮಿಯಾನಕ್ಕೆ ₹17.84 ಲಕ್ಷ, ಪಾರ್ಕಿಂಗ್‌ಗೆ ₹37.88 ಲಕ್ಷ ಹಾಗೂ ಸಿಸಿ ಕ್ಯಾಮೆರಾ ದುರಸ್ತಿಗೆ ₹29.89 ಲಕ್ಷ ವೆಚ್ಚ ತೋರಿಸಲಾಗಿದೆ. ಈ ಎಲ್ಲ ವೆಚ್ಚಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳಲೆ ದೇವಸ್ಥಾನದ ಲೆಕ್ಕದಲ್ಲೂ ಪ್ರಶ್ನೆ:

ನಂಜನಗೂಡು ತಾಲೂಕಿನ ಕಳಲೆ ದೇವಸ್ಥಾನದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎನ್ನಲಾಗುತ್ತಿದ್ದರೂ ₹18 ಲಕ್ಷ ವೆಚ್ಚ ತೋರಿಸಿರುವ ಬಗ್ಗೆ ಪ್ರಶ್ನೆಗಳು ಕೇಳಿಬಂದಿವೆ. ಇದರಲ್ಲಿ ₹14 ಲಕ್ಷ ಕಾಮಗಾರಿಗೆ ಹಾಗೂ ₹4 ಲಕ್ಷ ಜಾತ್ರೆ ಖರ್ಚಿಗೆ ಸಂಬಂಧಿಸಿದೆ ಎಂದು ಮಾಹಿತಿ ನೀಡಲಾಗಿದೆ.

ಒಟ್ಟಾರೆ 2024-25ನೇ ಸಾಲಿನ ಲೆಕ್ಕಪತ್ರದಲ್ಲಿ ₹4ರಿಂದ ₹5 ಕೋಟಿ ದುರುಪಯೋಗವಾಗಿರುವ ಶಂಕೆ ಇದೆ ಎಂದು ರೈತ ಮುಖಂಡರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ. ದೇವಾಲಯದ ಆದಾಯ-ವೆಚ್ಚದ ಪ್ರತಿಯೊಂದು ಅಂಶವನ್ನೂ ಪರಿಶೀಲಿಸಿ, ಲೋಪ ಅಥವಾ ಅಕ್ರಮ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ ಸಮಗ್ರ ತನಿಖೆಗೆ ಆದೇಶಿಸಿರುವುದು ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img