ಬೆಂಗಳೂರು: ರಾಜ್ಯ ಸರ್ಕಾರ ಸುಮಾರು 15 ಸಾವಿರ ಶಿಕ್ಷಕರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಆಗಸ್ಟ್ 11ರಂದು ಸರ್ಕಾರ ಹೊರಡಿಸಿರುವ ನೇಮಕಾತಿ ಅಧಿಸೂಚನೆ ಪ್ರಶ್ನಿಸಿ ಹುಬ್ಬಳ್ಳಿಯ ಉರ್ದು ಭಾಷಾ ಶಿಕ್ಷಕಿ ಅಸ್ಮಾ ಘೋರಿ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಪೀಠ ಈ ನಿರ್ದೇಶನ ನೀಡಿದೆ.
ಕನ್ನಡ ಅಥವಾ ಇಂಗ್ಲಿಷ್ ಬೋಧನಾ ಮಾಧ್ಯಮವಾಗಿರುವ ಶಾಲೆಗಳಲ್ಲಿ ಕೆಲವು ಖಾಲಿ ಹುದ್ದೆಗಳಿದ್ದು, ಸರ್ಕಾರ ಆ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನಿಸುತ್ತಿದೆ ಎಂದ ನ್ಯಾಯಪೀಠ, ಆದರೆ ಉರ್ದು ಶಾಲೆಗಳಲ್ಲಿ ನೇಮಕಾತಿ ಏಕೆ ನಡೆಯುತ್ತಿಲ್ಲ ಎಂಬುದು ಕಾನೂನುಬದ್ಧ ಪ್ರಶ್ನೆ ಎಂದು ಅಭಿಪ್ರಾಯಪಟ್ಟಿತು. ಉರ್ದು ಮಾಧ್ಯಮ ಶಾಲೆಗಳು ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಆಯ್ಕೆ ಪ್ರಕ್ರಿಯೆಯನ್ನು ಏಕೆ ಕೈಗೊಂಡಿಲ್ಲ ಎಂಬುದರ ಕುರಿತು ವಿವರಣೆ ನೀಡುವಂತೆ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿದ ಪೀಠ, ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸರ್ಕಾರದ ನೇಮಕಾತಿ ಅಧಿಸೂಚನೆ ಉರ್ದು ಮಾಧ್ಯಮ ಶಾಲೆಗಳನ್ನು ಸಂಪೂರ್ಣವಾಗಿ ಹೊರಗಿಟ್ಟಿದ್ದು, ಇದು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2026 ಮತ್ತು 19, 21, 29(1) ಮತ್ತು 350ಅ ವಿಧಿಗಳ ಉಲ್ಲಂಘನೆ ಎಂದು ವಾದಿಸಿದರು. ಅರ್ಜಿದಾರರ ಈ ಮನವಿಯನ್ನು ತಳ್ಳಿಹಾಕಿದ ನ್ಯಾಯಾಲಯ, ಈ ನಿರ್ದಿಷ್ಟ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದಿಲ್ಲ ಎಂದಿತು.



