ವಿಜಯಸಾಕ್ಷಿ ಸುದ್ದಿ, ಗದಗ: ಸಂಸ್ಕೃತ ಭಾಷೆ ನಮ್ಮ ದೇಶದ ಅಮೂಲ್ಯ ಸಂಪತ್ತಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಸ್ಕೃತ ಕಲಿಯುವ ಮೂಲಕ ಅದರ ಸಂರಕ್ಷಣೆ ಹಾಗೂ ಬೆಳವಣಿಗೆಗೆ ಮುಂದಾಗಬೇಕು ಎಂದು ವಿದ್ಯಾದಾನ ಸಮಿತಿ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪ್ರಶಾಂತ ಪಾಟೀಲ ಹೇಳಿದರು.
ಗದಗ ಜಿಲ್ಲಾ ಸಂಸ್ಕೃತ ಭಾರತೀ ವತಿಯಿಂದ ನಗರದ ಹಳೆ ಸರಾಫ ಬಜಾರದ ಜಗದಂಬಾ ಮಂದಿರದಲ್ಲಿ ಆಯೋಜಿಸಿದ್ದ ಸಂಸ್ಕೃತ ಸುಭಾಷಿತ ಪಾಠನ ವರ್ಗದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಸ್ಎಸ್ಕೆ ಮಹಿಳಾ ಮಂಡಳಿ ಅಧ್ಯಕ್ಷೆ ಸ್ನೇಹಲತಾ ಪಾ. ಕಬಾಡಿ ಮಾತನಾಡಿ, ನಾವು ನಿತ್ಯ ಜೀವನದಲ್ಲಿ ಅನೇಕ ಸಂಸ್ಕೃತ ಪದಗಳನ್ನು ಬಳಸುತ್ತಿದ್ದರೂ ಅವು ಸಂಸ್ಕೃತ ಪದಗಳೆಂಬ ಅರಿವು ಹಲವರಿಗೆ ಇಲ್ಲ. ಆದ್ದರಿಂದ ಸಂಸ್ಕೃತವನ್ನು ಉಳಿಸಿ, ಬೆಳೆಸಿ, ಹೆಚ್ಚು ಹೆಚ್ಚು ಕಲಿಯಬೇಕು ಎಂದರು.
ಗದಗ ಜಿಲ್ಲಾ ಸಂಸ್ಕೃತ ಭಾರತೀ ಸಂಯೋಜಕ ಹಾಗೂ ಜಗದ್ಗುರು ತೋಂಟದಾರ್ಯ ಸಂಸ್ಕೃತ ಪಾಠಶಾಲೆಯ ಮುಖ್ಯಾಧ್ಯಾಪಕ ಎಸ್.ಎನ್. ಶಿಂಪಿಗೇರ ಮಾತನಾಡಿ, ಪ್ರಾಚೀನ ಮತ್ತು ಸಮೃದ್ಧ ಭಾಷೆಯಾಗಿರುವ ಸಂಸ್ಕೃತವನ್ನು ಎಲ್ಲರೂ ಕಲಿತು ಇತರರಿಗೂ ಕಲಿಸುವ ಮೂಲಕ ಗ್ರಾಮಮಟ್ಟದಿಂದಲೇ ಅದರ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಶುರಾಮಸಾ ಬದಿಯವರು ವಹಿಸಿದ್ದರು. ಜಗದ್ಗುರು ತೋಂಟದಾರ್ಯ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿನಿಯರಿಂದ ಸಮೂಹ ನೃತ್ಯ ನಡೆಯಿತು.
ಸಂಸ್ಕೃತ ಭಾರತೀ ಬಾಲಕೇಂದ್ರ ಪ್ರಮುಖ ಶೈಲಜಾ ಕುಲಕರ್ಣಿ, ನಗರ ಸಂಯೋಜಕ ಮೌನೇಶ ಭಜಂತ್ರಿ, ಸಂಸ್ಕೃತ ಶಿಕ್ಷಕಿ ವಿಜಯಲಕ್ಷ್ಮೀ ಪಟ್ಟಣಶೆಟ್ಟಿ, ಸುಮನ್ ಖಟವಟೆ ಉಪಸ್ಥಿತರಿದ್ದರು. ರೇಖಾ ಮಡಿವಾಳರ ಕಾರ್ಯಕ್ರಮ ನಿರೂಪಿಸಿದರು. ಸುಮನಾ ಭಗಿನಿ ವಂದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಸಂಸ್ಕೃತ ಭಾಷೆ ನಮ್ಮ ದೇಶದ ಅಮೂಲ್ಯ ಸಂಪತ್ತಾಗಿದೆ. ಸಂಸ್ಕೃತ ಸಂಭಾಷಣೆಯ ಮೂಲಕ ಅದರ ಪ್ರಚಾರವನ್ನು ಹೆಚ್ಚಿಸಿ, ಹೆಚ್ಚಿನ ಜನರು ಈ ಭಾಷೆಯನ್ನು ಕಲಿಯುವಂತೆ ಮಾಡಬೇಕು.
— ಪ್ರಶಾಂತ ಪಾಟೀಲ, ಸಂಸ್ಕೃತ ಉಪನ್ಯಾಸಕ



