ಶಿವಮೊಗ್ಗ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗದ ಆರ್‌ಎಂಎಲ್ ನಗರದಲ್ಲಿ ನಿರ್ಮಿಸಲಾಗುತ್ತಿದ್ದ ಕಟೌಟ್ ಮೇಲೆ ಏರಿ ಪ್ಯಾಲೆಸ್ತೀನ್ ಧ್ವಜ ಹಾರಿಸಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಡಿ ಮೂವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ನಗರದ ನಿಹಾಲ್, ಉಮರ್ ಹಾಗೂ ಅಬ್ರಹಾರ್ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ನಿಹಾಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆಗಸ್ಟ್ 25ರಂದು ಮಧ್ಯಾಹ್ನ ಆರ್‌ಎಂಎಲ್ ನಗರದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಲಭಿಸಿದ ಮಾಹಿತಿಯ ಆಧಾರದ ಮೇಲೆ ಇನ್‌ಸ್ಟಾಗ್ರಾಂ ಖಾತೆಯೊಂದನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಟೌಟ್ ಮೇಲೆ ಮೂವರು ವ್ಯಕ್ತಿಗಳು ಪ್ಯಾಲೆಸ್ತೀನ್ ಧ್ವಜ ಹಾರಿಸುತ್ತಿರುವ 14 ಸೆಕೆಂಡುಗಳ ವಿಡಿಯೋ ಪೋಸ್ಟ್ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದಾಗ, ಆಗಸ್ಟ್ 24ರಂದು ಬೆಳಿಗ್ಗೆ 8ರಿಂದ 9 ಗಂಟೆಯ ಅವಧಿಯಲ್ಲಿ ಆರ್‌ಎಂಎಲ್ ನಗರದ ನಿವಾಸಿಗಳಾದ ಮೂವರು ಕಟೌಟ್ ಮೇಲೆ ಏರಿ ಈ ಕೃತ್ಯ ಎಸಗಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಡಿಯೋ ಮೂಲಕ ರಾಷ್ಟ್ರೀಯ ಏಕತೆಗೆ ಧಕ್ಕೆ ತರುವ ಹಾಗೂ ವಿವಿಧ ಸಮುದಾಯಗಳ ನಡುವೆ ವೈಮನಸ್ಸು ಮತ್ತು ದ್ವೇಷದ ಭಾವನೆ ಮೂಡಿಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ಪ್ರಯತ್ನ ನಡೆದಿದೆ ಎಂಬ ಆರೋಪದಡಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದು, ವಶಕ್ಕೆ ಪಡೆದಿರುವ ನಿಹಾಲ್‌ನಿಂದ ವಿಚಾರಣೆ ನಡೆಸುತ್ತಿದ್ದಾರೆ.



