ಗದಗ: ಗದಗ ಜಿಲ್ಲೆಯ ಬರಗಾಲ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ಅಸಮರ್ಪಕ ವರದಿ ಸಲ್ಲಿಸಲಾಗಿದೆ ಎಂಬ ಗಂಭೀರ ಆರೋಪವನ್ನು ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮಾಡಿದ್ದಾರೆ.
ಗದಗ ಜಿಲ್ಲೆಯ ಗದಗ, ಮುಂಡರಗಿ, ಶಿರಹಟ್ಟಿ, ರೋಣ, ನರಗುಂದ ಹಾಗೂ ಲಕ್ಷ್ಮೇಶ್ವರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆಯಿಂದ ರೈತರು ಬೆಳೆ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಸರ್ಕಾರ ಕೇವಲ ಒಂದು ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ವಾಸ್ತವ ಪರಿಸ್ಥಿತಿಗೆ ವಿರುದ್ಧವಾದ ಅಥವಾ ಅಸಮರ್ಪಕ ವರದಿ ನೀಡಿರುವ ಸಂಶಯ ವ್ಯಕ್ತವಾಗುತ್ತಿದೆ ಎಂದು ಬಾಬರಿ ಆರೋಪಿಸಿದರು.
ಪಕ್ಕದ ಬಾಗಲಕೋಟೆ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರ, ಗದಗ ಜಿಲ್ಲೆಯ ರೈತರ ಸಂಕಷ್ಟವನ್ನು ಕಡೆಗಣಿಸಿರುವುದು ಸರಿಯಲ್ಲ. ಅಧಿಕಾರಿಗಳು ಖುದ್ದಾಗಿ ಹೊಲಗಳಿಗೆ ಭೇಟಿ ನೀಡಿ ಸಮರ್ಪಕ ಸಮೀಕ್ಷೆ ನಡೆಸಿದ್ದಾರೆಯೇ ಅಥವಾ ಕಚೇರಿಯಲ್ಲಿಯೇ ಕುಳಿತು ವರದಿ ಸಿದ್ಧಪಡಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಮಧ್ಯಪ್ರವೇಶಿಸಿ, ಗದಗ ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ಮರುಪರಿಶೀಲನೆ ನಡೆಸಬೇಕು. ತಪ್ಪು ಅಥವಾ ಅಸಮರ್ಪಕ ವರದಿ ಇದ್ದರೆ ಅದನ್ನು ತಿರಸ್ಕರಿಸಿ, ಸೋಮವಾರದೊಳಗೆ ಗದಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.
ಇಲ್ಲವಾದರೆ ಮಂಗಳವಾರ ಗದಗ ಜಿಲ್ಲಾ ಬಂದ್ ನಡೆಸುವುದರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಯಲ್ಲಪ್ಪ ಬಾಬರಿ ಎಚ್ಚರಿಕೆ ನೀಡಿದರು.
ಉತ್ತರ ಕರ್ನಾಟಕವನ್ನು ನಿರಂತರವಾಗಿ ಕಡೆಗಣಿಸುವ ಧೋರಣೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ಕಿಚ್ಚನ್ನು ರೈತ ಸಂಘಟನೆಗಳು ಹಚ್ಚಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.



