ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಾಲಾ ಮಕ್ಕಳೊಂದಿಗೆ ರಕ್ಷಾಬಂಧನ ಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದ್ದಾರೆ. ತಮ್ಮ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿನಿಯರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಅವರ ಕೈಗೆ ಪ್ರೀತಿಯಿಂದ ರಾಖಿ ಕಟ್ಟಿ ಶುಭ ಹಾರೈಸಿದರು.
ರಾಖಿ ಕಟ್ಟಲು ಬಂದ ವಿದ್ಯಾರ್ಥಿನಿಯರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡ ಪ್ರಧಾನಿ ಮೋದಿ, ಮಕ್ಕಳೊಂದಿಗೆ ಆತ್ಮೀಯವಾಗಿ ಹರಟೆ ಹೊಡೆದರು. ರಾಖಿ ಕಟ್ಟುವಾಗ ಮಕ್ಕಳಿಗೆ ಹೈ-ಫೈವ್ ನೀಡುತ್ತಾ, ಅವರ ಯೋಗಕ್ಷೇಮ ಹಾಗೂ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದರು. ವಿದ್ಯಾರ್ಥಿನಿಯೊಬ್ಬಳು ರಾಖಿ ಕಟ್ಟಿದ ನಂತರ, ಪ್ರಧಾನಿ ಅವಳ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿದರು. ಮಕ್ಕಳೊಂದಿಗೆ ನಗುತ್ತಾ, ತಮಾಷೆಯ ಮಾತುಗಳನ್ನಾಡುತ್ತಾ ಸಂವಾದ ನಡೆಸಿದ ಪ್ರಧಾನಿ, ಪ್ರತಿಯೊಬ್ಬ ಮಗುವಿಗೂ ಪ್ರೀತಿಯಿಂದ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.



