ಗದಗ: ಸಹೋದರ-ಸಹೋದರಿಯರ ಪ್ರೀತಿ, ವಿಶ್ವಾಸ, ಆತ್ಮೀಯತೆ ಹಾಗೂ ರಕ್ಷಣೆಯ ಪವಿತ್ರ ಬಾಂಧವ್ಯವನ್ನು ಸಾರುವ ರಕ್ಷಾ ಬಂಧನ ಹಬ್ಬವನ್ನು ಯುವ ಮುಖಂಡ ಅನಿಲ ಮೆಣಸಿನಕಾಯಿ ಅವರ ನೇತೃತ್ವದಲ್ಲಿ ವಿಶಿಷ್ಟ ಹಾಗೂ ಅದ್ಧೂರಿಯಾಗಿ ಆಚರಿಸಲಾಯಿತು.
ಅನಿಲ ಮೆಣಸಿನಕಾಯಿ ಅವರ ಒಂದು ಕರೆಗೆ ಅಪಾರ ಸ್ಪಂದನೆ ವ್ಯಕ್ತವಾಗಿದ್ದು, ಸಾವಿರಾರು ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸಿ ಅವರಿಗೆ ರಾಖಿ ಕಟ್ಟಿ ಶುಭಾಶಯ ಕೋರಿದರು.
ಅವಳಿ ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅನಿಲ ಮೆಣಸಿನಕಾಯಿ ಅವರ ಕೈಗೆ ರಾಖಿ ಕಟ್ಟಿ ಸಹೋದರತ್ವದ ಬಾಂಧವ್ಯವನ್ನು ಗಟ್ಟಿಗೊಳಿಸಿದರು.
ಅವಳಿ ನಗರದ ಪ್ರಜ್ಞಾವಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅನಿಲ ಮೆಣಸಿನಕಾಯಿ ಅವರಿಗೆ ರಾಖಿ ಕಟ್ಟಿ ಶುಭ ಹಾರೈಸಿದರು. ಮಹಿಳೆಯರ ಅಭೂತಪೂರ್ವ ಸ್ಪಂದನೆ ಹಾಗೂ ಬಿಜೆಪಿ ಕಾರ್ಯಕರ್ತರ ಉತ್ಸಾಹಭರಿತ ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪರಿಣಮಿಸಿತು.
ಒಂದೇ ವೇದಿಕೆಯಲ್ಲಿ ಸಾವಿರಾರು ಮಹಿಳೆಯರು ಸೇರಿ ರಾಖಿ ಕಟ್ಟುವ ಮೂಲಕ ಯುವ ಮುಖಂಡನ ಮೇಲಿನ ತಮ್ಮ ಪ್ರೀತಿ, ವಿಶ್ವಾಸ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಬಿಜೆಪಿ ಕಾರ್ಯಕರ್ತರು ಮತ್ತು ಮಹಿಳೆಯರ ಸಂಭ್ರಮದ ಪಾಲ್ಗೊಳ್ಳುವಿಕೆಯಿಂದ ರಕ್ಷಾ ಬಂಧನ ಆಚರಣೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಮಹಿಳೆಯರ ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದ ಯುವ ಮುಖಂಡ ಅನಿಲ ಮೆಣಸಿನಕಾಯಿ, ರಾಖಿ ಎಂಬುದು ಕೇವಲ ದಾರದ ಬಂಧನವಲ್ಲ, ಅದು ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಹಾಗೂ ರಕ್ಷಣೆಯ ಪವಿತ್ರ ಸಂಕೇತವಾಗಿದೆ. ಸಾವಿರಾರು ತಾಯಂದಿರು ಮತ್ತು ಸಹೋದರಿಯರು ನೀಡಿರುವ ಈ ಪ್ರೀತಿ ಹಾಗೂ ಆಶೀರ್ವಾದವನ್ನು ಸದಾ ಗೌರವದಿಂದ ಕಾಣುತ್ತೇನೆ. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸ್ನೇಹಿತರ ಹಾಗೂ ಅಭಿಮಾನಿಗಳ ಪ್ರೀತಿ ಮತ್ತು ಸಹಕಾರವೂ ಅವಿಸ್ಮರಣೀಯ ಎಂದು ಹೇಳಿದರು.

