ಚೆನ್ನೈ: 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಹೆಸರಿಗೆ ಮತ್ತೊಂದು ಮಹತ್ವದ ದಾಖಲೆ ಸೇರ್ಪಡೆಯಾಗಿದೆ. ಹಾಲಿ ಚಾಂಪಿಯನ್ ಸೆಂಟ್ರಲ್ ಝೋನ್ ವಿರುದ್ಧ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡದ ಪರ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಸೂರ್ಯವಂಶಿ, ಟೂರ್ನಮೆಂಟ್ ಇತಿಹಾಸದಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
ನಾಯಕ ಇಶಾನ್ ಕಿಶನ್ ಅನುಪಸ್ಥಿತಿಯಲ್ಲಿ ಪೂರ್ವ ವಲಯ ತಂಡವನ್ನು ಮುನ್ನಡೆಸಬೇಕಿದ್ದ ಸೂರ್ಯವಂಶಿ, ಬ್ಯಾಟಿಂಗ್ನಲ್ಲೂ ಅದ್ಭುತ ಪ್ರದರ್ಶನ ನೀಡಿದರು. ತಮ್ಮ ಎಂದಿನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಮುಂದುವರಿಸಿದ ಅವರು, ಕೇವಲ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಸೂರ್ಯವಂಶಿ ಅವರ ಸ್ಫೋಟಕ ಇನ್ನಿಂಗ್ಸ್ನಲ್ಲಿ ಮೂರು ಸಿಕ್ಸರ್ಗಳು ಹಾಗೂ ಐದು ಬೌಂಡರಿಗಳು ಸೇರಿದ್ದವು. ಶತಕದತ್ತ ಮುನ್ನುಗ್ಗುತ್ತಿದ್ದ ಅವರು ಮೈಲಿಗಲ್ಲು ತಲುಪಲು ಕೇವಲ 8 ರನ್ಗಳ ಅಂತರದಲ್ಲಿದ್ದಾಗ ವಿಕೆಟ್ ಒಪ್ಪಿಸಿದರು.
ಆದರೂ ಅರ್ಧಶತಕದೊಂದಿಗೆ ಸೂರ್ಯವಂಶಿ ದುಲೀಪ್ ಟ್ರೋಫಿಯಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಈ ಮೂಲಕ 57 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಲಕ್ಷ್ಮಣ್ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. 1969ರಲ್ಲಿ ಲಕ್ಷ್ಮಣ್ ಸಿಂಗ್ ಅವರು 16 ವರ್ಷ 23 ದಿನಗಳ ವಯಸ್ಸಿನಲ್ಲಿ ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಬಾರಿಸಿದ್ದರು.
ಇದೀಗ ವೈಭವ್ ಸೂರ್ಯವಂಶಿ ಕೇವಲ 15 ವರ್ಷ 157 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಸಿಡಿಸಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 2025ರಲ್ಲಿ 16 ವರ್ಷ 307 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಗಳಿಸಿದ್ದ ಪಿಯೂಷ್ ಚಾವ್ಲಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ದುಲೀಪ್ ಟ್ರೋಫಿಯಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರರು:
1. ವೈಭವ್ ಸೂರ್ಯವಂಶಿ – 15 ವರ್ಷ 157 ದಿನಗಳು
2. ಲಕ್ಷ್ಮಣ್ ಸಿಂಗ್ (1969) – 16 ವರ್ಷ 23 ದಿನಗಳು
3. ಪಿಯೂಷ್ ಚಾವ್ಲಾ (2025) – 16 ವರ್ಷ 307 ದಿನಗಳು
15ನೇ ವಯಸ್ಸಿನಲ್ಲೇ ದೇಶೀಯ ಕ್ರಿಕೆಟ್ನ ಪ್ರತಿಷ್ಠಿತ ಟೂರ್ನಿಯೊಂದರಲ್ಲಿ ದಾಖಲೆ ನಿರ್ಮಿಸಿರುವ ವೈಭವ್ ಸೂರ್ಯವಂಶಿ, ಭಾರತೀಯ ಕ್ರಿಕೆಟ್ನಲ್ಲಿ ಮತ್ತೊಬ್ಬ ಯುವ ಪ್ರತಿಭೆಯಾಗಿ ಗಮನ ಸೆಳೆಯುತ್ತಿದ್ದಾರೆ.



