HomeLife Styleಮಹಿಳೆಯರೇ ಎಚ್ಚರ! ಮೆನೋಪಾಸ್‌ಗೂ ಮುನ್ನವೇ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು; ನಿರ್ಲಕ್ಷ್ಯ ಬೇಡ

ಮಹಿಳೆಯರೇ ಎಚ್ಚರ! ಮೆನೋಪಾಸ್‌ಗೂ ಮುನ್ನವೇ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು; ನಿರ್ಲಕ್ಷ್ಯ ಬೇಡ

For Dai;y Updates Join Our whatsapp Group

ಮಹಿಳೆಯರ ಜೀವನದಲ್ಲಿ ಮೆನೋಪಾಸ್‌ ಒಂದು ಸಹಜ ಹಾರ್ಮೋನಲ್ ಬದಲಾವಣೆಯ ಹಂತ. ಆದರೆ ಮೆನೋಪಾಸ್‌ ಏಕಾಏಕಿ ಆರಂಭವಾಗುವುದಿಲ್ಲ.

ಅದಕ್ಕೂ ಹಲವು ವರ್ಷಗಳ ಮುನ್ನವೇ ಮಹಿಳೆಯರ ದೇಹದಲ್ಲಿ ಹಾರ್ಮೋನ್‌ಗಳ ಏರಿಳಿತ ಆರಂಭವಾಗಬಹುದು. ಈ ಪರಿವರ್ತನಾ ಹಂತವನ್ನೇ ಪೆರಿಮೆನೋಪಾಸ್‌ ಎಂದು ಕರೆಯಲಾಗುತ್ತದೆ.

ಈ ಅವಧಿಯಲ್ಲಿ ಪಿರಿಯಡ್ಸ್‌ ಅನಿಯಮಿತವಾಗುವುದು, ಹಠಾತ್ ದೇಹದಲ್ಲಿ ಬಿಸಿ ಹೆಚ್ಚಾಗುವುದು, ರಾತ್ರಿ ವೇಳೆ ಅತಿಯಾಗಿ ಬೆವರುವುದು, ನಿದ್ರೆಯ ಸಮಸ್ಯೆ, ಮೂಡ್ ಬದಲಾವಣೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಬಹುತೇಕ ಮಹಿಳೆಯರು ಇವುಗಳನ್ನು ವಯಸ್ಸಿನ ಸಹಜ ಬದಲಾವಣೆ ಎಂದು ಭಾವಿಸಿ ನಿರ್ಲಕ್ಷ್ಯ ಮಾಡುತ್ತಾರೆ.

ಆದರೆ ಪೆರಿಮೆನೋಪಾಸ್‌ ಅವಧಿಯಲ್ಲಿ ದೇಹದಲ್ಲಿ ಹಲವು ಹಾರ್ಮೋನಲ್ ಬದಲಾವಣೆಗಳು ಸಂಭವಿಸುವುದರಿಂದ ಈ ಬಗ್ಗೆ ಮಹಿಳೆಯರು ಅರಿವು ಹೊಂದಿರುವುದು ಅಗತ್ಯ ಎಂದು ಯಥಾರ್ಥ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ರುಚಿ ಭಂಡಾರಿ ಸಲಹೆ ನೀಡಿದ್ದಾರೆ.

ಪೆರಿಮೆನೋಪಾಸ್‌ ಎಂದರೇನು?

ಮೆನೋಪಾಸ್‌ಗೂ ಮುನ್ನ ಮಹಿಳೆಯ ದೇಹದಲ್ಲಿ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರೋನ್ ಹಾರ್ಮೋನ್‌ಗಳ ಮಟ್ಟದಲ್ಲಿ ಏರಿಳಿತ ಆರಂಭವಾಗುತ್ತದೆ. ಈ ಹಂತವೇ ಪೆರಿಮೆನೋಪಾಸ್‌.

ಸತತ 12 ತಿಂಗಳ ಕಾಲ ಪಿರಿಯಡ್ಸ್‌ ಆಗದೇ ಇರುವ ಸ್ಥಿತಿಯನ್ನು ಮೆನೋಪಾಸ್‌ ಎಂದು ಕರೆಯಲಾಗುತ್ತದೆ. ಅದಕ್ಕೂ ಮುನ್ನ ನಡೆಯುವ ಪರಿವರ್ತನಾ ಅವಧಿಯೇ ಪೆರಿಮೆನೋಪಾಸ್‌.

ಪಿರಿಯಡ್ಸ್‌ನಲ್ಲಿ ಬದಲಾವಣೆ”

ಪೆರಿಮೆನೋಪಾಸ್‌ನ ಪ್ರಮುಖ ಲಕ್ಷಣಗಳಲ್ಲಿ ಪಿರಿಯಡ್ಸ್‌ನಲ್ಲಿ ಆಗುವ ಬದಲಾವಣೆಯೂ ಒಂದು.

  • ಪಿರಿಯಡ್ಸ್‌ ಬೇಗ ಅಥವಾ ತಡವಾಗಿ ಬರಬಹುದು.
  • ಎರಡು ಪಿರಿಯಡ್ಸ್‌ಗಳ ನಡುವಿನ ಅಂತರ ಹೆಚ್ಚಾಗಬಹುದು.
  • ಕೆಲವು ತಿಂಗಳು ಪಿರಿಯಡ್ಸ್‌ ಆಗದೇ ಇರಬಹುದು.
  • ರಕ್ತಸ್ರಾವದ ಪ್ರಮಾಣ ಕಡಿಮೆಯಾಗಬಹುದು ಅಥವಾ ಹೆಚ್ಚಾಗಬಹುದು.

ಆದರೆ ಪಿರಿಯಡ್ಸ್‌ ಅನಿಯಮಿತವಾಗಿರುವುದೆಲ್ಲವೂ ಪೆರಿಮೆನೋಪಾಸ್‌ನ ಲಕ್ಷಣ ಎಂದೇನಲ್ಲ. ಬೇರೆ ಆರೋಗ್ಯ ಸಮಸ್ಯೆಗಳೂ ಇದಕ್ಕೆ ಕಾರಣವಾಗಿರಬಹುದು.

ಹಠಾತ್ ದೇಹದಲ್ಲಿ ಬಿಸಿ ಹೆಚ್ಚಾಗುವುದು:

ಯಾವುದೇ ಕಾರಣವಿಲ್ಲದೆ ದೇಹದಲ್ಲಿ ಏಕಾಏಕಿ ಬಿಸಿ ಹೆಚ್ಚಾದಂತೆ ಅನಿಸುವುದನ್ನು ಹಾಟ್ ಫ್ಲ್ಯಾಶ್ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಮುಖ, ಕುತ್ತಿಗೆ ಹಾಗೂ ಎದೆಯ ಭಾಗದಲ್ಲಿ ಬಿಸಿ ಹೆಚ್ಚಾಗಿ ನಂತರ ಬೆವರು ಕಾಣಿಸಿಕೊಳ್ಳಬಹುದು.

ರಾತ್ರಿ ವೇಳೆ ಅತಿಯಾಗಿ ಬೆವರುವುದು:

ನಿದ್ರೆಯಲ್ಲಿರುವಾಗ ಅತಿಯಾಗಿ ಬೆವರುವುದು ಕೂಡ ಪೆರಿಮೆನೋಪಾಸ್‌ನ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಇದರಿಂದ ಪದೇಪದೇ ನಿದ್ರೆ ಕೆಡುವುದು, ಬೆಳಗ್ಗೆ ಎದ್ದಾಗ ದಣಿವಿನ ಅನುಭವವಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಬಹುದು.

ನಿದ್ರೆಯ ಸಮಸ್ಯೆ:

ಪೆರಿಮೆನೋಪಾಸ್‌ ಅವಧಿಯಲ್ಲಿ ಕೆಲ ಮಹಿಳೆಯರಿಗೆ ನಿದ್ರೆ ಬರಲು ಕಷ್ಟವಾಗಬಹುದು. ಮಧ್ಯರಾತ್ರಿ ಪದೇಪದೇ ಎಚ್ಚರವಾಗುವುದು ಅಥವಾ ಬೆಳಗ್ಗೆ ಬೇಗ ಎಚ್ಚರವಾಗುವುದು ಕೂಡ ಸಂಭವಿಸಬಹುದು.

ಹಾಟ್ ಫ್ಲ್ಯಾಶ್‌, ರಾತ್ರಿ ಬೆವರು, ಮೂಡ್ ಬದಲಾವಣೆ ಮತ್ತು ಆತಂಕದಂತಹ ಸಮಸ್ಯೆಗಳು ನಿದ್ರೆಯ ಗುಣಮಟ್ಟವನ್ನು ಮತ್ತಷ್ಟು ಕಡಿಮೆ ಮಾಡಬಹುದು.

ಮೂಡ್ ಬದಲಾವಣೆ ಮತ್ತು ಕಿರಿಕಿರಿ:

ಹಾರ್ಮೋನಲ್ ಬದಲಾವಣೆಗಳಿಂದ ಕೆಲ ಮಹಿಳೆಯರಲ್ಲಿ ಕಿರಿಕಿರಿ, ಆತಂಕ, ಮೂಡ್ ಸ್ವಿಂಗ್‌ ಹಾಗೂ ಭಾವನಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳಬಹುದು.

ಸಾಕಷ್ಟು ನಿದ್ರೆ ಮಾಡಿದರೂ ದೇಹದಲ್ಲಿ ಶಕ್ತಿ ಇಲ್ಲದಂತೆ ಅನಿಸುವುದು ಅಥವಾ ದಿನವಿಡೀ ಆಯಾಸವಾಗಿರುವ ಅನುಭವವೂ ಕಾಣಿಸಿಕೊಳ್ಳಬಹುದು. ಹಾರ್ಮೋನಲ್ ಬದಲಾವಣೆ ಮತ್ತು ನಿದ್ರೆಯ ಕೊರತೆ ಇದಕ್ಕೆ ಕಾರಣವಾಗಬಹುದು.

ಪೆರಿಮೆನೋಪಾಸ್‌ ಅವಧಿಯಲ್ಲಿ ಕೆಲ ಮಹಿಳೆಯರಿಗೆ ಬ್ರೇನ್ ಫಾಗ್ ರೀತಿಯ ಅನುಭವವಾಗಬಹುದು. ಅಂದರೆ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗುವುದು, ವಿಷಯಗಳನ್ನು ನೆನಪಿಸಿಕೊಳ್ಳಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುವುದು ಮುಂತಾದ ಬದಲಾವಣೆಗಳು ಕಂಡುಬರಬಹುದು.

ಈಸ್ಟ್ರೋಜನ್‌ ಮಟ್ಟದಲ್ಲಿನ ಬದಲಾವಣೆಯಿಂದ ಕೆಲ ಮಹಿಳೆಯರಲ್ಲಿ ಯೋನಿ ಒಣತನ ಉಂಟಾಗಬಹುದು. ಇದರಿಂದ ಅಸಹಜತೆ ಅಥವಾ ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.

ಈ ರೀತಿಯ ಸಮಸ್ಯೆ ಎದುರಾದರೆ ಮುಜುಗರಪಡದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ತೂಕದಲ್ಲೂ ಬದಲಾವಣೆಯಾಗಬಹುದು:

ಪೆರಿಮೆನೋಪಾಸ್‌ ಸಮಯದಲ್ಲಿ ಹಾರ್ಮೋನಲ್ ಬದಲಾವಣೆಗಳ ಜೊತೆಗೆ ವಯಸ್ಸು, ದೈಹಿಕ ಚಟುವಟಿಕೆ, ಆಹಾರ ಪದ್ಧತಿ ಮತ್ತು ನಿದ್ರೆಯಂತಹ ಅಂಶಗಳಿಂದ ತೂಕದಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು.

ಮಿಡ್‌ಲೈಫ್‌ ನಂತರ ಮಹಿಳೆಯರು ಕೇವಲ ಪಿರಿಯಡ್ಸ್‌ ಬದಲಾವಣೆಗಳತ್ತ ಮಾತ್ರ ಗಮನ ಹರಿಸದೆ ಮೂಳೆಗಳ ಆರೋಗ್ಯ, ರಕ್ತದೊತ್ತಡ, ತೂಕ ಮತ್ತು ಹೃದಯದ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು.

ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಯುಕ್ತ ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಹಾಗೂ ಸಾಕಷ್ಟು ನಿದ್ರೆ ಆರೋಗ್ಯಕರ ಜೀವನಶೈಲಿಯ ಪ್ರಮುಖ ಭಾಗಗಳಾಗಿವೆ.

ಮಹಿಳೆಯರು 35-40ರ ವಯಸ್ಸಿನ ನಂತರ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ. ವಿಶೇಷವಾಗಿ ತುಂಬಾ ಅಧಿಕ ರಕ್ತಸ್ರಾವ, ಅಸಹಜ ರಕ್ತಸ್ರಾವ, ದೀರ್ಘಕಾಲ ಪಿರಿಯಡ್ಸ್‌ ನಿಂತ ಬಳಿಕ ಮತ್ತೆ ರಕ್ತಸ್ರಾವವಾಗುವುದು ಅಥವಾ ಯಾವುದೇ ಲಕ್ಷಣಗಳು ದಿನನಿತ್ಯದ ಜೀವನಕ್ಕೆ ತೀವ್ರ ತೊಂದರೆ ಉಂಟುಮಾಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಪೆರಿಮೆನೋಪಾಸ್‌ ಅಥವಾ ಮೆನೋಪಾಸ್‌ಗೆ ಸಂಬಂಧಿಸಿದ ಲಕ್ಷಣಗಳು ಕಂಡುಬಂದರೆ ವೈಯಕ್ತಿಕ ಚಿಕಿತ್ಸೆ ಪಡೆಯುವ ಮೊದಲು ಅರ್ಹ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img