ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಮಹತ್ವದ ಬೆಳವಣಿಗೆಗಳಿಗೆ ವೇದಿಕೆ ಸಿದ್ಧವಾಗಿದೆ. ಆರೋಪಿ ದರ್ಶನ್ ಸಲ್ಲಿಸಿರುವ ಅರ್ಜಿಯ ವಿಚಾರದಲ್ಲಿ ಹೈಕೋರ್ಟ್ ಆದೇಶದ ನಿರೀಕ್ಷೆಯ ನಡುವೆಯೇ, ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ಕೂಡ ದಾಖಲಾಗುವ ಸಾಧ್ಯತೆಯಿದೆ. ಹೀಗಾಗಿ ಇಂದು ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಕೊಲೆ ಪ್ರಕರಣದಲ್ಲಿ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಪ್ರದೋಷ್ ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ಈ ಹಿಂದೆ ಅಂಗೀಕರಿಸಿತ್ತು. ಬಳಿಕ ಸೆಪ್ಟೆಂಬರ್ 2ರಂದು ಸಾಕ್ಷಿ ಹೇಳಿಕೆ ದಾಖಲಿಸಲು ವಿಟ್ನೆಸ್ ಸಮನ್ಸ್ ಜಾರಿಗೊಳಿಸಲಾಗಿತ್ತು.
ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷಿ ನುಡಿಯುವಂತೆ ಜೈಲಾಧಿಕಾರಿಗಳ ಮೂಲಕ ಪ್ರದೋಷ್‌ಗೆ ಸಮನ್ಸ್ ಜಾರಿ ಮಾಡಲು ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಸೂಚಿಸಿದ್ದರು. ಹೀಗಾಗಿ ಇಂದು ಮಧ್ಯಾಹ್ನ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯಲಿದೆಯೇ ಎಂಬುದೇ ಸದ್ಯದ ಪ್ರಮುಖ ಪ್ರಶ್ನೆಯಾಗಿದೆ.
ಇದರ ನಡುವೆ, ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಸೆಷನ್ಸ್ ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಪರ ವಕೀಲರು ಸಲ್ಲಿಸಿರುವ ಅರ್ಜಿ ಹೈಕೋರ್ಟ್ ಕಾಸ್ ಲಿಸ್ಟ್‌ನಲ್ಲಿ 49ನೇ ಮ್ಯಾಟರ್ ಆಗಿದೆ.
ಇಂದು ಬೆಳಗ್ಗೆ 11.30ರ ಸುಮಾರಿಗೆ ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಹೊರಬೀಳುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಮಧ್ಯಾಹ್ನ 12ರ ವೇಳೆಗೆ ಪ್ರದೋಷ್ ಹೇಳಿಕೆ ದಾಖಲಿಸಲು ಕೋರ್ಟ್ ಸಿದ್ಧತೆ ನಡೆಸಿದೆ. ಹೈಕೋರ್ಟ್ ಆದೇಶ ಹಾಗೂ ಪ್ರದೋಷ್ ಸಾಕ್ಷಿ ಹೇಳಿಕೆ—ಎರಡೂ ಬೆಳವಣಿಗೆಗಳು ಒಂದೇ ದಿನ ನಡೆಯುವ ಸಾಧ್ಯತೆಯಿಂದ ಪ್ರಕರಣ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸಿದೆ.



