HomeDharwadಉದ್ಯೋಗಕ್ಕಾಗಿ ಗುಳೆ ಹೋಗುವುದು ತಪ್ಪಿಸಿ : ಗ್ರಾಮದಲ್ಲೇ ಕೆಲಸ ಕಲ್ಪಿಸುವ ಭರವಸೆ: ಸಂತೋಷ್ ಲಾಡ್

ಉದ್ಯೋಗಕ್ಕಾಗಿ ಗುಳೆ ಹೋಗುವುದು ತಪ್ಪಿಸಿ : ಗ್ರಾಮದಲ್ಲೇ ಕೆಲಸ ಕಲ್ಪಿಸುವ ಭರವಸೆ: ಸಂತೋಷ್ ಲಾಡ್

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಧಾರವಾಡ: ಉದ್ಯೋಗ ಅರಸಿ ಗ್ರಾಮೀಣ ಜನರು ಗುಳೆ ಹೋಗಬೇಕಾದ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ವಿಬಿಜಿ-ರಾಮ್-ಜಿ ಯೋಜನೆಯಡಿ ಮಂಜೂರಾಗಿರುವ ಕಾಮಗಾರಿಗಳನ್ನು ಗ್ರಾಮದಲ್ಲಿಯೇ ಕೈಗೆತ್ತಿಕೊಂಡು ಸ್ಥಳೀಯ ನಿವಾಸಿಗಳಿಗೆ ಉದ್ಯೋಗ ಒದಗಿಸಲಾಗುವುದು ಎಂದು ಕಾರ್ಮಿಕ ಹಾಗೂ ಉದ್ಯೋಗ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.

ಧಾರವಾಡ ತಾಲೂಕಿನ ಕಲಕೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಜನಸಂಪರ್ಕ ಸಭೆ ಹಾಗೂ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಬಿಜಿ-ರಾಮ್-ಜಿ ಯೋಜನೆಗೆ ಸಂಬಂಧಿಸಿದಂತೆ ಯೋಜನಾ ಅನುಮೋದನೆ ಹಾಗೂ ಕಾಮಗಾರಿಗಳಿಗೆ ಅಧಿಕೃತ ಮಂಜೂರಾತಿ ದೊರೆತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಗ್ರಾಮಸ್ಥರು ಕೆಲಸಕ್ಕಾಗಿ ಬೇರೆ ಊರುಗಳಿಗೆ ತೆರಳುವ ಅಗತ್ಯವಿಲ್ಲ. ಗ್ರಾಮದ ಜನರಿಗೆ ಇದೇ ಊರಿನಲ್ಲಿಯೇ ನಿಯಮಿತವಾಗಿ ಉದ್ಯೋಗ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರೈತರು ಹಾಗೂ ಕೂಲಿಕಾರರಿಗೆ ಭರವಸೆ ನೀಡಿದರು.

ಗ್ರಾಮಗಳ ಅಭಿವೃದ್ಧಿಗೆ ಯುವಜನತೆ ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರವೇ ಜನರ ಬಳಿಗೆ ಬಂದಿದೆ. ಗ್ರಾಮ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಯುವಕರು, ಸಾರ್ವಜನಿಕರು ಮತ್ತು ಊರಿನ ಮುಖಂಡರು ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಾರ್ವಜನಿಕರು ಸಲ್ಲಿಸಿರುವ ಪ್ರಮುಖ ಹಾಗೂ ತುರ್ತು ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ನಿಗದಿತ ಅವಧಿಯಲ್ಲಿ ಹಂತ ಹಂತವಾಗಿ ಈಡೇರಿಸಲಾಗುವುದು. ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲು ಸಾರ್ವಜನಿಕರ ಮೇಲ್ವಿಚಾರಣೆಯೂ ಅಗತ್ಯ ಎಂದು ಹೇಳಿದರು.

ಮೂಲಸೌಕರ್ಯದಿಂದ ಶಿಕ್ಷಣದವರೆಗೆ ಭರವಸೆ

ಗ್ರಾಮದ ಸ್ಮಶಾನಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣ ಹಾಗೂ ಹಾಳಾಗಿರುವ ಗ್ರಾಮೀಣ ರಸ್ತೆಗಳನ್ನು ತಕ್ಷಣವೇ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಅಂಗವಿಕಲರಿಗೆ ಸ್ವಯಂ ಉದ್ಯೋಗಕ್ಕಾಗಿ ಅಂಗಡಿ ಸೌಲಭ್ಯ, ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಲಾ ಶೌಚಾಲಯಗಳ ನಿರ್ಮಾಣ, ಮಾದರಿ ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳ ಅನುದಾನ ಹಾಗೂ ಕಲಕೇರಿ ಗ್ರಾಮದಲ್ಲಿ ನೂತನ ಕಾಲೇಜು ಸ್ಥಾಪನೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಲಕೇರಿ ಗ್ರಾಮದಲ್ಲಿ ಹೊಸ ಬ್ಯಾಂಕ್ ಶಾಖೆ ಹಾಗೂ ಪಶುಸಂಗೋಪನಾ ಆಸ್ಪತ್ರೆ ಸ್ಥಾಪನೆಗೆ ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲಿಸಲಾಗಿದೆ ಎಂದರು.

ಗ್ರಾಮೀಣ ಯುವಕರನ್ನು ಸಂಘಟಿಸಲು ಹಾಗೂ ಕ್ರೀಡೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ‘ಭಾರತ ಜೋಡೋ’ ಯುವ ಸಂಘಗಳ ಯೋಜನೆಯಡಿ ಅರ್ಹ ಯುವ ಸಂಘಗಳಿಗೆ ಪ್ರೋತ್ಸಾಹಧನ ನೀಡುವ ಯೋಜನೆಯ ಸದುಪಯೋಗ ಪಡೆಯುವಂತೆ ಸಚಿವರು ಕರೆ ನೀಡಿದರು.

ಜನಪ್ರತಿನಿಧಿಗಳು ಜನಸೇವಕರು. ಗ್ರಾಮಗಳ ಸಮಸ್ಯೆ ಪರಿಹಾರಕ್ಕೆ ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಉದ್ಯೋಗಕ್ಕಾಗಿ ಗುಳೆ ಹೋಗುವ ಪರಿಸ್ಥಿತಿ ತಪ್ಪಿಸಿ, ಗ್ರಾಮದಲ್ಲಿಯೇ ಕೆಲಸ ಹಾಗೂ ಅಭಿವೃದ್ಧಿಯ ಅವಕಾಶ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ.

— ಸಂತೋಷ್ ಎಸ್. ಲಾಡ್, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img