ವಿಜಯಸಾಕ್ಷಿ ಸುದ್ದಿ, ಗದಗ: ೨೦೨೩ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಸ್ಲಂ ನಿವಾಸಿಗಳಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸ್ಲಂ ಪ್ರದೇಶಗಳಿಗೆ ‘ಶ್ರಮಿಕ ನಿವಾಸ ಪ್ರದೇಶ’ ಎಂದು ನಾಮಕರಣ ಮಾಡಿ, ವಸತಿ ಯೋಜನೆ ಹಾಗೂ ಹಕ್ಕುಪತ್ರ ವಿತರಣೆ ಮಾಡುವ ಭರವಸೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದ ವಸತಿರಹಿತ ಕುಟುಂಬಗಳ ಸಮೀಕ್ಷೆ ನಡೆಸಿ ‘ನಗರ ಲ್ಯಾಂಡ್ ಬ್ಯಾಂಕ್’ ಯೋಜನೆ ಜಾರಿಗೊಳಿಸುವುದರೊಂದಿಗೆ ಪ್ರತಿಯೊಂದು ಬಡ ಕುಟುಂಬಕ್ಕೂ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಬಡವರು ಸ್ವತಃ ಮನೆ ನಿರ್ಮಿಸಿಕೊಳ್ಳಲು ರಾಜ್ಯ ಸರ್ಕಾರದಿಂದ ರೂ. ೩.೫ ಲಕ್ಷ ಹಾಗೂ ಕೇಂದ್ರ ಸರ್ಕಾರದಿಂದ ರೂ. ೧.೫ ಲಕ್ಷ ಸಬ್ಸಿಡಿ ನೀಡಬೇಕು. ಜಿಲ್ಲಾ ಕೇಂದ್ರಗಳಲ್ಲಿ ನಿವೇಶನ ಹಂಚಿಕೆ ಮಾಡುವಾಗ ಘೋಷಿತ ಹಾಗೂ ಅಘೋಷಿತ ಕೊಳಚೆ ಪ್ರದೇಶದ ಕುಟುಂಬಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ, ಮೌಲಾಸಾಬ ಎಸ್. ಗಚ್ಚಿ, ಶರಣಪ್ಪ ಸೂಡಿ, ಪರವೀನ್ಬಾನು ಹವಾಲ್ದಾರ, ಪುಷ್ಪಾ ಬಿಜಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



