2026ರ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಭಾರತ ಮಹಿಳಾ ತಂಡ ಸತತ ಎರಡನೇ ಗೆಲುವು ದಾಖಲಿಸಿದ್ದು, ಹಾಂಗ್‌ಕಾಂಗ್ ಚೀನಾ ವಿರುದ್ಧ 137 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಭಾರತ ತಂಡ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಟಾಸ್ ಗೆದ್ದ ಹಾಂಗ್‌ಕಾಂಗ್ ಚೀನಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಸ್ಮೃತಿ ಮಂಧಾನ ಅವರ ದಾಖಲೆಯ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 193 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಗುರಿ ಬೆನ್ನತ್ತಿದ ಹಾಂಗ್‌ಕಾಂಗ್ ತಂಡ 16.2 ಓವರ್‌ಗಳಲ್ಲಿ ಕೇವಲ 56 ರನ್‌ಗಳಿಗೆ ಆಲೌಟ್ ಆಯಿತು.
ಸ್ಮೃತಿ ಮಂಧಾನ ಸ್ಫೋಟಕ ಶತಕ:
ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 64 ಎಸೆತಗಳಲ್ಲಿ 124 ರನ್ ಗಳಿಸಿದ ಅವರು 14 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಸಿಡಿಸಿದರು. ಈ ಮೂಲಕ ಮಹಿಳಾ ಏಷ್ಯಾಕಪ್ ಇತಿಹಾಸದಲ್ಲೇ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲಿಸಿದರು.
ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದ ಮಂಧಾನ ಅರ್ಧಶತಕದ ಬಳಿಕ ಬ್ಯಾಟಿಂಗ್ ವೇಗ ಹೆಚ್ಚಿಸಿದರು. ಕೇವಲ 57 ಎಸೆತಗಳಲ್ಲಿ ಶತಕ ಪೂರೈಸಿ ತಂಡದ ಮೊತ್ತವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದರು.
ಮಿಥಾಲಿ ರಾಜ ದಾಖಲೆ ಹಿಂದಿಕ್ಕಿದ ಮಂಧಾನ:
ಈ ದಾಖಲೆಯ ಇನ್ನಿಂಗ್ಸ್‌ನೊಂದಿಗೆ ಮಂಧಾನ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಹಾಂಗ್‌ಕಾಂಗ್ ವಿರುದ್ಧದ ಇನ್ನಿಂಗ್ಸ್ ವೇಳೆ ಅವರು ಒಟ್ಟು 10,880 ಅಂತಾರಾಷ್ಟ್ರೀಯ ರನ್ ಗಳಿಸಿ, ಮಾಜಿ ನಾಯಕಿ ಮಿಥಾಲಿ ರಾಜ್ ಅವರ 10,868 ರನ್‌ಗಳ ದಾಖಲೆಯನ್ನು ಹಿಂದಿಕ್ಕಿದರು.
ಅಲ್ಲದೆ, ಇದು ಮಂಧಾನ ಅವರ 18ನೇ ಅಂತಾರಾಷ್ಟ್ರೀಯ ಶತಕವಾಗಿದ್ದು, ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ್ತಿಯೆಂಬ ಹೆಗ್ಗಳಿಕೆಯನ್ನು ಮತ್ತಷ್ಟು ಬಲಪಡಿಸಿದೆ.
ಬೌಲಿಂಗ್‌ನಲ್ಲೂ ಭಾರತದ ಪ್ರಾಬಲ್ಯ:
193 ರನ್‌ಗಳ ಗುರಿ ಬೆನ್ನತ್ತಿದ ಹಾಂಗ್‌ಕಾಂಗ್ ಬ್ಯಾಟರ್‌ಗಳಿಗೆ ಭಾರತದ ಬೌಲರ್‌ಗಳು ಅವಕಾಶ ನೀಡಲಿಲ್ಲ. ದೀಪ್ತಿ ಶರ್ಮಾ 3 ವಿಕೆಟ್ ಪಡೆದು ಮಿಂಚಿದರೆ, ಶ್ರೀ ಚರಣಿ, ಪ್ರೇಮಾ ರಾವತ್ ಹಾಗೂ ನಂದಿನಿ ಶರ್ಮಾ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಪರಿಣಾಮ ಹಾಂಗ್‌ಕಾಂಗ್ 56 ರನ್‌ಗಳಿಗೆ ಕುಸಿಯಿತು. ಈ ಗೆಲುವಿನೊಂದಿಗೆ ಭಾರತ ಮಹಿಳಾ ಏಷ್ಯಾಕಪ್‌ನಲ್ಲಿ ಸತತ ಎರಡನೇ ಜಯ ದಾಖಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ ಮೊದಲ ತಂಡವಾಗಿದೆ.

