ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಪ್ರಮುಖ ಆರೋಪಿ, ಉಡುಪಿ ಮೂಲದ ಗೌರವ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ಬಂಧನ ಭೀತಿಯ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನಿಗೆ ಗೌರವ್ ಶೆಟ್ಟಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ 59ನೇ ಸಿಸಿಎಚ್ ಕೋರ್ಟ್, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸಾಕ್ಷಿದಾರ ಸಂದೀಪ್‌ಗೆ ವಾಟ್ಸಪ್ ಕರೆ ಮೂಲಕ ಆರೋಪಿಗಳು ಬೆದರಿಕೆ ಹಾಕಿದ್ದರು. ಈ ಪ್ರಕರಣದಲ್ಲಿ ಸುಹಾಸ್, ವೇಣು ಹಾಗೂ ಪುನೀತ್‌ರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಪ್ರಮುಖ ಆರೋಪಿ ಗೌರವ್ ಶೆಟ್ಟಿ ಈವರೆಗೆ ತಲೆಮರೆಸಿಕೊಂಡಿದ್ದರು.
ಬಂಧಿತ ಆರೋಪಿಗಳ ವಿಚಾರಣೆ ಹಾಗೂ ಮೊಬೈಲ್ ಪರಿಶೀಲನೆ ವೇಳೆ, ಗೌರವ್ ಶೆಟ್ಟಿ ಕಿರಣ್ ರೆಡ್ಡಿ ಜೊತೆ ಕಾನ್ಫರೆನ್ಸ್ ಕರೆ ಮಾಡಿ ಸಾಕ್ಷಿಗೆ ಬೆದರಿಕೆ ಹಾಕಿದ್ದು ಬೆಳಕಿಗೆ ಬಂದಿತ್ತು. ಇದಾದ ಬಳಿಕ ಗೌರವ್ ಶೆಟ್ಟಿ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರು.
ಇದೀಗ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿರುವ ಗೌರವ್ ಶೆಟ್ಟಿ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.



