ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ಜುಲೈವರೆಗೆ ಬರೋಬ್ಬರಿ 5,805 ನಾಯಿ ಕಡಿತ ಹಾಗೂ 213 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, ಸಾಂಕ್ರಾಮಿಕ ಮತ್ತು ಪ್ರಾಣಿಜನ್ಯ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 2ರಂದು ನಡೆದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆಯಲ್ಲಿ ನೀರಿನಿಂದ ಹರಡುವ, ಲಸಿಕೆಯಿಂದ ತಡೆಯಬಹುದಾದ ಹಾಗೂ ಪ್ರಾಣಿಜನ್ಯ ರೋಗಗಳೊಂದಿಗೆ ಹಾವು ಕಡಿತ ಮತ್ತು ರೇಬೀಸ್ ಮರಣ ಪ್ರಕರಣಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು.
ಜನವರಿಯಿಂದ ಜುಲೈವರೆಗೆ ಜಿಲ್ಲೆಯಲ್ಲಿ 2,140 ಕರಳುಬೇನೆ, 33 ಡೆಂಗ್ಯೂ, 8 ಚಿಕೂನ್‌ಗುನ್ಯಾ, 5 ಮಲೇರಿಯಾ, 10 ಆನೆಕಾಲು ರೋಗ ಹಾಗೂ 10 ಇನ್‌ಫ್ಲೂಯೆಂಜಾ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 1,319 ಇತರೆ ಪ್ರಾಣಿ ಕಡಿತ ಪ್ರಕರಣಗಳೂ ವರದಿಯಾಗಿದ್ದು, ಎರಡು ಸಂಶಯಾಸ್ಪದ ರೇಬೀಸ್ ಮರಣ ಹಾಗೂ ಮೂರು ಹಾವು ಕಡಿತ ಮರಣ ಪ್ರಕರಣಗಳು ದಾಖಲಾಗಿವೆ.
ನೀರು ಶುದ್ಧೀಕರಣ, ಪರಿಸರ ಸ್ವಚ್ಛತೆ ಹಾಗೂ ಸೊಳ್ಳೆ ನಿಯಂತ್ರಣಕ್ಕೆ ಆದ್ಯತೆ ನೀಡುವಂತೆ ಸೂಚಿಸಲಾಯಿತು. ಸಾರ್ವಜನಿಕರು ಶುದ್ಧ ಕುಡಿಯುವ ನೀರು ಬಳಸುವುದು, ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಹಾಗೂ ಜ್ವರ ಕಾಣಿಸಿಕೊಂಡ ತಕ್ಷಣ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಲಾಯಿತು.
ನಾಯಿ ಅಥವಾ ಇತರೆ ಪ್ರಾಣಿ ಕಚ್ಚಿದರೆ ಗಾಯವನ್ನು ಸಾಬೂನಿನಿಂದ ಹರಿಯುವ ನೀರಿನಲ್ಲಿ ಕನಿಷ್ಠ 15 ನಿಮಿಷ ತೊಳೆದು ತಕ್ಷಣ ಆಸ್ಪತ್ರೆಗೆ ತೆರಳಬೇಕು. ಹಾವು ಕಚ್ಚಿದ ಸಂದರ್ಭದಲ್ಲಿ ನಾಟಿ ಅಥವಾ ಮಾಂತ್ರಿಕ ಚಿಕಿತ್ಸೆಗೆ ಮೊರೆ ಹೋಗದೆ ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಿ.ಸಿ. ಕರಿಗೌಡರ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಹುಲಗಣ್ಣವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋಟ್
ಸಾಂಕ್ರಾಮಿಕ ರೋಗಗಳ ತಡೆಗೆ ಎಲ್ಲ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳು, ಹಾವು ಕಡಿತಕ್ಕೆ ಆ್ಯಂಟಿ ಸ್ನೇಕ್ ವೆನಮ್ ಹಾಗೂ ಪ್ರಾಣಿ ಕಡಿತಕ್ಕೆ ಆ್ಯಂಟಿ ರೇಬೀಸ್ ಲಸಿಕೆ ಮತ್ತು ಇಮ್ಯುನೊಗ್ಲೋಬ್ಯುಲಿನ್ ಸಮರ್ಪಕವಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕು.
-ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿಗಳು

