ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಾಮದ ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ಆಚರಿಸಲಾಯಿತು.
ಧೋತಿ, ಕಿರೀಟ, ನವಿಲುಗರಿ ಧರಿಸಿ ಮುದ್ದು ಕೃಷ್ಣನ ವೇಷ ತೊಟ್ಟ ಪುಟಾಣಿಗಳು ಹಾಗೂ ಸಾಂಪ್ರದಾಯಿಕ ಉಡುಗೆಯಲ್ಲಿ ರಾಧೆ ಮತ್ತು ರುಕ್ಮಿಣಿಯರಾಗಿ ಸಿಂಗಾರಗೊಂಡ ಬಾಲಕಿಯರು ನೆರೆದವರ ಗಮನ ಸೆಳೆದರು. ಶಾಲಾ ಆವರಣದಲ್ಲಿ ಪುಟಾಣಿಗಳೇ ಬೃಂದಾವನದ ವಾತಾವರಣ ಸೃಷ್ಟಿಸಿದರು.
ಮುಖ್ಯಶಿಕ್ಷಕಿ ಜ್ಯೋತಿ ಗೌಡರ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ಅವತರಿಸಿದ ಶ್ರೀಕೃಷ್ಣನ ಬದುಕು, ಬೋಧನೆಗಳು ಹಾಗೂ ಧರ್ಮದ ಸಂದೇಶಗಳು ಎಲ್ಲರಿಗೂ ಆದರ್ಶಪ್ರಾಯವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿಯರಾದ ಗೀತಾ ಕೋಲಾರ, ಶಶಿಕಲಾ ಚಟ್ಟೇರ, ಚೈತ್ರಾ ತಳಕಲ್ಲ, ಲಲಿತಾ ಬಾವಿ, ಮೇಘನಾ ಮುದಕವಿ, ಶಿಲ್ಪಾ ಶಿರೋಳ, ಮಹಾಮಾಯ ಗಂಭೀರ ಸೇರಿದಂತೆ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.



