HomeGadag Newsಗೀತೆ–ಕಾಯಕ ತತ್ವವೇ ಬಲಿಷ್ಠ ರಾಷ್ಟ್ರದ ಅಡಿಗಲ್ಲು: ಎಸ್.ವಿ. ಸಂಕನೂರ

ಗೀತೆ–ಕಾಯಕ ತತ್ವವೇ ಬಲಿಷ್ಠ ರಾಷ್ಟ್ರದ ಅಡಿಗಲ್ಲು: ಎಸ್.ವಿ. ಸಂಕನೂರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀಕೃಷ್ಣ ಪರಮಾತ್ಮನ ಭಗವದ್ಗೀತೆಯ ಸಂದೇಶಗಳು ಹಾಗೂ ಜಗಜ್ಯೋತಿ ಬಸವೇಶ್ವರರ ‘ಕಾಯಕವೇ ಕೈಲಾಸ’ ತತ್ವವನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮೃದ್ಧ, ಸದೃಢ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿದರು.

ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಭಗವಾನ್ ಶ್ರೀಕೃಷ್ಣ ಜಯಂತಿ–೨೦೨೬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎಂಬ ಸಂದೇಶದ ಮೂಲಕ ಕರ್ತವ್ಯಕ್ಕೆ ಅತ್ಯುನ್ನತ ಸ್ಥಾನ ನೀಡಿದ್ದಾನೆ. ಪ್ರತಿಫಲದ ನಿರೀಕ್ಷೆಯಿಲ್ಲದೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಬದುಕಿನಲ್ಲಿ ಎಷ್ಟೇ ಸಂಕಷ್ಟಗಳು ಎದುರಾದರೂ ಧೈರ್ಯ ಕಳೆದುಕೊಳ್ಳದೆ ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.

ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವವೂ ಪ್ರಾಮಾಣಿಕ ಕಾಯಕದ ಮಹತ್ವವನ್ನು ಸಾರುತ್ತದೆ. ಈ ಇಬ್ಬರು ಮಹನೀಯರ ಜೀವನ ಸಂದೇಶಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಶ್ರೀಕೃಷ್ಣನ ಆರಾಧಕರು ಬದುಕಿನಲ್ಲಿ ಕೆಲವು ಪ್ರಮುಖ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಸಂಕನೂರ, ಜೀವಿಗಳ ಮೇಲೆ ಕರುಣೆ ಹಾಗೂ ದಯೆ ಹೊಂದಬೇಕು, ಮದ್ಯಪಾನ ಸೇರಿದಂತೆ ದುಶ್ಚಟಗಳಿಂದ ದೂರವಿರಬೇಕು, ನೈತಿಕ ಮೌಲ್ಯಗಳನ್ನು ಪಾಲಿಸಬೇಕು ಹಾಗೂ ಜೂಜಾಟ ಮತ್ತು ಬೆಟ್ಟಿಂಗ್‌ನಂತಹ ಚಟಗಳಿಗೆ ಬಲಿಯಾಗಬಾರದು ಎಂದರು.

ದುರಾಸೆಗೆ ಒಳಗಾಗದೆ ಸತ್ಯದ ಹಾದಿಯಲ್ಲಿ ಸಾಗಿದರೆ ಮನಸ್ಸಿನ ಶಾಂತಿ ಮತ್ತು ಉತ್ತಮ ಬದುಕು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಸಮಾಜಗಳು ಮುಂಚೂಣಿಗೆ ಬರಬೇಕಾದರೆ ಜ್ಞಾನ ಸಂಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜ್ಞಾನವೇ ಅತ್ಯಂತ ದೊಡ್ಡ ಶಕ್ತಿಯಾಗಿದ್ದು, ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಧರ್ಮದ ಹಾದಿಯಲ್ಲಿ ಸತ್ಯ, ಪ್ರಾಮಾಣಿಕತೆ ಹಾಗೂ ಕಾಯಕದೊಂದಿಗೆ ಮುನ್ನಡೆದರೆ ಯಶಸ್ಸು ಖಚಿತ ಎಂದು ಸಂಕನೂರ ಪ್ರತಿಪಾದಿಸಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಶ್ರೀಕೃಷ್ಣನು ತನ್ನ ಜೀವನದಲ್ಲಿ ಯಾವುದೇ ಕಾರ್ಯವನ್ನು ಸ್ವಾರ್ಥಕ್ಕಾಗಿ ಮಾಡಲಿಲ್ಲ. ಆತನ ಪ್ರತಿಯೊಂದು ಹೆಜ್ಜೆಯೂ ಸಮಾಜದ ಹಿತ ಮತ್ತು ಧರ್ಮ ಸಂಸ್ಥಾಪನೆಗಾಗಿ ಇತ್ತು ಎಂದು ಹೇಳಿದರು.

ಮಹಾಭಾರತದ ವಿವಿಧ ಪ್ರಸಂಗಗಳಲ್ಲಿ ಶ್ರೀಕೃಷ್ಣ ತೆಗೆದುಕೊಂಡ ನಿರ್ಧಾರಗಳು ಧರ್ಮದ ಗೆಲುವಿಗಾಗಿ ರೂಪಿಸಿದ ವಿಶಾಲ ಯೋಜನೆಯ ಭಾಗವಾಗಿದ್ದವು. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕು. ತಮಗೆ ತಪ್ಪು ಎಂದು ಅನಿಸುವ ಕೆಲಸವನ್ನು ಮಾಡದಿರುವುದೇ ನಿಜವಾದ ಕರ್ತವ್ಯ ಎಂದು ತಿಳಿಸಿದರು.

ಯಾವುದೇ ಕೆಲಸ ಕೈಗೊಳ್ಳುವ ಮುನ್ನ ಅದರ ಸಾಧಕ–ಬಾಧಕಗಳನ್ನು ಸರಿಯಾಗಿ ವಿಶ್ಲೇಷಿಸಿ ಮುನ್ನಡೆದರೆ ತಪ್ಪುಗಳನ್ನು ಕಡಿಮೆ ಮಾಡಬಹುದು. ಸದಾ ಧನಾತ್ಮಕ ಮನೋಭಾವನೆಯೊಂದಿಗೆ ಸಮಾಜದ ಒಳಿತಿಗಾಗಿ ಶ್ರಮಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಘಟಕ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ಅವರು ಶ್ರೀಕೃಷ್ಣನ ಜನನ ಹಾಗೂ ಬಾಲಲೀಲೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ದೇವಕಿ ಮತ್ತು ವಸುದೇವರ ಅಷ್ಟಮ ಗರ್ಭದಲ್ಲಿ ಶ್ರೀಕೃಷ್ಣ ಜನಿಸಿದ ಪ್ರಸಂಗದಿಂದ ಹಿಡಿದು, ಕಂಸನ ಅಹಂಕಾರವನ್ನು ಮುರಿಯಲು ಭಗವಂತ ಅವತರಿಸಿದ ಕಥೆಯನ್ನು ವಿವರಿಸಿದರು. ಕತ್ತಲ ರಾತ್ರಿಯಲ್ಲಿ ಮಳೆ–ಬಿರುಗಾಳಿಯ ನಡುವೆಯೂ ವಸುದೇವರು ಮಗುವನ್ನು ಬುಟ್ಟಿಯಲ್ಲಿಟ್ಟು ಯಮುನಾ ನದಿಯನ್ನು ದಾಟಿದಾಗ ನಡೆದ ದೈವಿಕ ಘಟನೆಗಳನ್ನು ಸ್ಮರಿಸಿದರು.

ಗೋಕುಲದಲ್ಲಿ ಯಶೋದೆಯ ಮಡಿಲಲ್ಲಿ ಬೆಳೆದ ಬಾಲಕೃಷ್ಣನ ತುಂಟಾಟಗಳು ಹಾಗೂ ಆತನ ಬಾಲಲೀಲೆಗಳನ್ನು ವಿವರಿಸಿದ ಅವರು, ಇಂದ್ರನ ಅತಿವೃಷ್ಟಿಯಿಂದ ಗೋಕುಲದ ಜನರನ್ನು ರಕ್ಷಿಸಲು ಶ್ರೀಕೃಷ್ಣ ತನ್ನ ಕಿರುಬೆರಳಿನಲ್ಲಿ ಗೋವರ್ಧನ ಗಿರಿಯನ್ನು ಎತ್ತಿಹಿಡಿದ ಪ್ರಸಂಗವು ಪ್ರಕೃತಿ ಹಾಗೂ ಜೀವಜಾಲದ ಸಂರಕ್ಷಣೆಯ ಮಹತ್ವವನ್ನು ಸಾರುತ್ತದೆ ಎಂದರು.

ಇಂದಿನ ಯುವಜನತೆ ಶ್ರೀಕೃಷ್ಣನ ಜೀವನ ಮತ್ತು ಭಗವದ್ಗೀತೆಯ ಸಂದೇಶಗಳನ್ನು ಅರ್ಥಮಾಡಿಕೊಂಡು ದುಶ್ಚಟಗಳಿಂದ ದೂರವಿರಬೇಕು. ಸಮಯವನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣ, ಜ್ಞಾನ, ಕೌಶಲ್ಯ ಹಾಗೂ ಉತ್ತಮ ಚಿಂತನೆಗಳ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಎಂ.ಕೆ. ಲಮಾಣಿ ಸಲಹೆ ನೀಡಿದರು.

ಯುವಜನತೆ ಉತ್ತಮ ದಾರಿಯಲ್ಲಿ ಸಾಗಿದಾಗ ಮಾತ್ರ ಸದೃಢ ಕುಟುಂಬ, ಆರೋಗ್ಯಕರ ಸಮಾಜ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿದ್ದು ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ವಿ. ಬಳ್ಳಾರಿ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಬಾಹುಬಲಿ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img