ವಾಷಿಂಗ್ಟನ್: ಪ್ರಾದೇಶಿಕ ಬೆದರಿಕೆಗಳ ವಿರುದ್ಧ ಸೌದಿ ಅರೇಬಿಯಾದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಸುಮಾರು 5 ಶತಕೋಟಿ ಡಾಲರ್ (47,245 ಕೋಟಿ ರೂಪಾಯಿ) ಮೌಲ್ಯದ ಬಾಂಬ್‌ಗಳು, ಗೈಡೆನ್ಸ್ ಕಿಟ್ಸ್ ಮತ್ತು ಸಂಬಂಧಿತ ರಕ್ಷಣಾ ಸಲಕರಣೆಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ ನೀಡಿದೆ.
5,004 ಕೆಎಂಯು-572 ಜಂಟಿ ನೇರ ದಾಳಿ ಯುದ್ಧಸಾಮಗ್ರಿ, 5,004 ಬಿಎಲ್‌ಯು-111 (500-ಪೌಂಡ್ ತೂಕದ) ಸಾಮಾನ್ಯ ಬಳಕೆಯ ಬಾಂಬ್‌ಗಳು ಹಾಗೂ 5,000 ಬಿಎಲ್‌ಯು-117 (2,000-ಪೌಂಡ್ ತೂಕದ) ಸಾಮಾನ್ಯ ಬಳಕೆಯ ಬಾಂಬ್‌ಗಳನ್ನು ಸೌದಿ ಅರೇಬಿಯಾ ಅಮೆರಿಕದಿಂದ ಖರೀದಿಸಲಿದೆ.
ಇವುಗಳ ಜೊತೆಗೆ ಫ್ಯೂಸ್ ವ್ಯವಸ್ಥೆಗಳು, ಕಂಟೈನರ್‌ಗಳು, ಬಿಡಿಭಾಗಗಳು, ಲಾಜಿಸ್ಟಿಕ್ಸ್ ಬೆಂಬಲ ಹಾಗೂ ಅಮೆರಿಕ ಸರ್ಕಾರ ಮತ್ತು ಗುತ್ತಿಗೆದಾರರಿಂದ ಎಂಜಿನಿಯರಿಂಗ್ ಮತ್ತು ತಾಂತ್ರಿಕ ನೆರವು ಈ ಪ್ಯಾಕೇಜ್‌ನಲ್ಲಿ ಲಭ್ಯವಾಗಲಿದೆ. ಪ್ರಮುಖ ರಕ್ಷಣಾ ಸಂಸ್ಥೆ ಬೋಯಿಂಗ್ ಈ ಒಪ್ಪಂದದ ಮುಖ್ಯ ಗುತ್ತಿಗೆದಾರ ಸಂಸ್ಥೆಯಾಗಿರಲಿದೆ.
ಈ ಮಾರಾಟ ಸೌದಿ ಅರೇಬಿಯಾದ ವಾಯು ರಕ್ಷಣಾ ಸಾಮರ್ಥ್ಯ ಹೆಚ್ಚಿಸಲಿದ್ದು, ಭದ್ರತೆಯನ್ನು ಬಲಪಡಿಸಲು ಮತ್ತು ಅಮೆರಿಕ ಹಾಗೂ ಇತರ ಕೊಲ್ಲಿ ಪಾಲುದಾರರ ಪಡೆಗಳೊಂದಿಗೆ ಸಮನ್ವಯ ಸುಧಾರಿಸಲು ನೆರವಾಗಲಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.
ಪ್ರಮುಖ ನ್ಯಾಟೋಯೇತರ ಮಿತ್ರರಾಷ್ಟ್ರದ ಭದ್ರತೆಯನ್ನು ಸುಧಾರಿಸುವ ಮೂಲಕ ಈ ಒಪ್ಪಂದ ಅಮೆರಿಕದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಗುರಿಗಳನ್ನು ಬೆಂಬಲಿಸುತ್ತದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಈ ಮಾರಾಟದಿಂದ ಈ ಭಾಗದ ಪ್ರಾದೇಶಿಕ ಸೇನಾ ಸಮತೋಲನಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಹಾಗೂ ಅಮೆರಿಕದ ರಕ್ಷಣಾ ಸನ್ನದ್ಧತೆಯ ಮೇಲೂ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಇರಾನ್ ಪಡೆಗಳು ಮತ್ತು ಯೆಮೆನ್‌ನ ಹೌತಿ ಬಂಡುಕೋರರ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳ ಭೀತಿ ಎದುರಿಸುತ್ತಿರುವ ಸೌದಿ ಅರೇಬಿಯಾಗೆ ಈ ರಕ್ಷಣಾ ಒಪ್ಪಂದ ಮಹತ್ವದ ಬಲ ತಂದುಕೊಡಲಿದೆ.



