ಕೋಲಾರ: ಡಿವೈಡರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ದೊಡ್ಡಕಾರಿ ಬಳಿ ನಡೆದಿದೆ.
ಮೃತರನ್ನು ಬೆಂಗಳೂರಿನ ವಿದ್ಯಾರಣ್ಯಪುರ ಮೂಲದ ಶಾರದಮ್ಮ (70), ದೀಕ್ಷಿತ್ (25), ದೇವೇಂದ್ರ ಕುಮಾರ್ (41) ಹಾಗೂ ಜಿಷ್ಣು (13) ಎಂದು ಗುರುತಿಸಲಾಗಿದೆ.
ಕುಟುಂಬಸ್ಥರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಟೊಯೋಟಾ ರಿಯಾನ್ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ವಿಕಾಸ್, ನೀತು ಹಾಗೂ ಆದ್ವಿಕ ಗಾಯಗೊಂಡಿದ್ದು, ಅವರನ್ನು ಬಂಗಾರಪೇಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.
ಘಟನೆ ಕುರಿತು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



