ವಿಜಯಸಾಕ್ಷಿ ಸುದ್ದಿ, ಗದಗ: ಎರಡು ದಶಕಗಳಿಂದ ಮನೆ-ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಮೂಲಕ ಗದಗ-ಬೆಟಗೇರಿ ಅವಳಿ ನಗರದ ಸ್ವಚ್ಛತೆ ಕಾಪಾಡುತ್ತಿರುವ 133 ದಲಿತ ಮಹಿಳಾ ಪೌರಕಾರ್ಮಿಕರು, ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ಅಥವಾ ನೇರ ನೇಮಕಾತಿ ನೀಡುವಂತೆ ಆಗ್ರಹಿಸಿ ನಗರಸಭೆ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ನಗರಸಭೆ ಸದಸ್ಯ ಕೃಷ್ಣಾ ಪರಾಪೂರ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ, ಬೇಡಿಕೆ ಈಡೇರುವವರೆಗೆ ಮನೆ-ಮನೆ ಕಸ ಸಂಗ್ರಹ ಹಾಗೂ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸುವುದಾಗಿ ಕಾರ್ಮಿಕರು ಎಚ್ಚರಿಸಿದ್ದಾರೆ. ಇದರಿಂದ ಅವಳಿ ನಗರದಲ್ಲಿ ಕಸದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಆತಂಕ ಎದುರಾಗಿದೆ.
2005-06ರಿಂದ ನಗರಸಭೆ ವ್ಯಾಪ್ತಿಯ ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳಿಂದ ತ್ಯಾಜ್ಯ ಸಂಗ್ರಹಿಸುವ ಕೆಲಸ ಮಾಡುತ್ತಿರುವ ಈ ಮಹಿಳಾ ಕಾರ್ಮಿಕರಿಗೆ ಆರಂಭದಲ್ಲಿ ಮನೆಗಳಿಂದ ಸಂಗ್ರಹಿಸುವ ವಂತಿಕೆಯ ಆಧಾರದಲ್ಲಿ ಪಾವತಿ ಮಾಡಲಾಗುತ್ತಿತ್ತು. ವಂತಿಕೆ ಸಂಗ್ರಹದಲ್ಲಿ ಎದುರಾದ ಸಮಸ್ಯೆಗಳ ಹಿನ್ನೆಲೆಯಲ್ಲಿ 2014ರಲ್ಲಿ ನಗರಸಭೆ ಟೆಂಡರ್ ಮೂಲಕ 133 ಕಾರ್ಮಿಕರನ್ನು ನೇಮಿಸಿಕೊಂಡು ತಿಂಗಳಿಗೆ ₹3 ಸಾವಿರ ಗೌರವಧನ ನಿಗದಿಪಡಿಸಿತ್ತು. 2017ರಲ್ಲಿ ಅದು ₹5 ಸಾವಿರಕ್ಕೆ ಏರಿಕೆಯಾಗಿದ್ದು, 2022ರಿಂದ ₹6,500 ನೀಡಲಾಗುತ್ತಿದೆ ಎಂದು ಕಾರ್ಮಿಕರು ತಿಳಿಸಿದ್ದಾರೆ.
ನಗರಸಭೆಯಲ್ಲಿ ಇತ್ತೀಚೆಗೆ ನೇಮಕಗೊಂಡ ಲೋಡರ್‌ಗಳು, ಚಾಲಕರು ಹಾಗೂ ಮೊಬಿಲೈಸರ್‌ಗಳಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ನೀಡಲಾಗುತ್ತಿದೆ. ಆದರೆ 20 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಮಾತ್ರ ಕನಿಷ್ಠ ವೇತನದಿಂದ ವಂಚಿಸಲಾಗುತ್ತಿದೆ ಎಂದು ಮಹಿಳಾ ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದೇವೆ. ಬೆಲೆ ಏರಿಕೆಯ ನಡುವೆ ₹6,500 ಗೌರವಧನದಲ್ಲಿ ಕುಟುಂಬ ನಿರ್ವಹಿಸುವುದು ಕಷ್ಟವಾಗಿದೆ. ನಮ್ಮ ಸೇವೆಯನ್ನು ಪರಿಗಣಿಸಿ ಕನಿಷ್ಠ ವೇತನ ಜಾರಿಗೊಳಿಸಬೇಕು; ಸಾಧ್ಯವಾಗದಿದ್ದರೆ ನಗರಸಭೆಯಿಂದ ನೇರವಾಗಿ ವೇತನ ಪಾವತಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದೇ ವೇಳೆ ಪೌರಕಾರ್ಮಿಕರ ನೇರ ನೇಮಕಾತಿ ವಿಚಾರದಲ್ಲಿಯೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಬೇಡಿಕೆಗಳ ಕುರಿತು ಸ್ಪಷ್ಟ ಭರವಸೆ ದೊರೆಯದಿದ್ದರೆ ಹೋರಾಟ ತೀವ್ರಗೊಳಿಸಿ ಕುಟುಂಬ ಸಮೇತ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ಶಾಸಕ ಡಾ. ಹೆಚ್.ಕೆ. ಪಾಟೀಲ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಗರದ ಸ್ವಚ್ಛತೆ ಕಾಪಾಡುವಲ್ಲಿ ಮಹಿಳಾ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. 20 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಅವರಿಗೆ ಕನಿಷ್ಠ ವೇತನ ನೀಡದೆ ಕಡಿಮೆ ಗೌರವಧನದಲ್ಲಿ ದುಡಿಸಿಕೊಳ್ಳುವುದು ನ್ಯಾಯಸಮ್ಮತವಲ್ಲ. ಕೊರೋನಾ ಸಂದರ್ಭದಲ್ಲೂ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಈ ಕಾರ್ಮಿಕರಿಗೆ ಸರ್ಕಾರದ ನಿಯಮದಂತೆ ವೇತನ ಅಥವಾ ನೇರ ನೇಮಕಾತಿ ಕಲ್ಪಿಸಬೇಕು. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು.
— ಕೃಷ್ಣಾ ಪರಾಪೂರ, ನಗರಸಭೆ ಸದಸ್ಯ



