ಲಂಡನ್: ಜಾಗತಿಕ ಲೋಹ ಮಾರುಕಟ್ಟೆಯಲ್ಲಿ ತಾಮ್ರದ ಬೆಲೆ ಹೊಸ ದಾಖಲೆ ನಿರ್ಮಿಸಿದೆ.
ಲಂಡನ್ ಮೆಟಲ್ ಎಕ್ಸ್‌ಚೇಂಜ್‌ನಲ್ಲಿ (LME) ತಾಮ್ರದ ಬೆಲೆ ಪ್ರತಿ ಮೆಟ್ರಿಕ್ ಟನ್‌ಗೆ 14,533 ಡಾಲರ್ ತಲುಪಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟ ದಾಖಲಿಸಿದೆ.
ಕಳೆದ 12 ತಿಂಗಳಲ್ಲಿ ತಾಮ್ರದ ಬೆಲೆಯಲ್ಲಿ ಜಾಗತಿಕವಾಗಿ ಸುಮಾರು ಶೇ.47ರಷ್ಟು ಏರಿಕೆ ಕಂಡುಬಂದಿದೆ. ತಾಮ್ರದ ಬೇಡಿಕೆ ಹೆಚ್ಚುತ್ತಿರುವುದು ಹಾಗೂ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವೇ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು?
ಅಮೆರಿಕದ ಆಮದು ಸುಂಕದ ಭೀತಿ: ರೀಫೈನ್ಡ್ ಕಾಪರ್ ಆಮದಿನ ಮೇಲೆ ಅಮೆರಿಕ ಸರ್ಕಾರ ಹೆಚ್ಚುವರಿ ಸುಂಕ ವಿಧಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಾಗತಿಕ ಪೂರೈಕೆದಾರರು ಹೆಚ್ಚಿನ ಪ್ರಮಾಣದ ತಾಮ್ರವನ್ನು ಅಮೆರಿಕಕ್ಕೆ ರವಾನಿಸುತ್ತಿದ್ದಾರೆ. ಇದರಿಂದ ಇತರ ಮಾರುಕಟ್ಟೆಗಳಲ್ಲಿ ತಾಮ್ರದ ಲಭ್ಯತೆ ಕಡಿಮೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಐ ಮತ್ತು ಡೇಟಾ ಸೆಂಟರ್‌ಗಳ ಬೇಡಿಕೆ: ಕೃತಕ ಬುದ್ಧಿಮತ್ತೆ (AI) ಆಧಾರಿತ ಡೇಟಾ ಸೆಂಟರ್‌ಗಳ ನಿರ್ಮಾಣ, ವಿದ್ಯುತ್ ಗ್ರಿಡ್‌ಗಳ ವಿಸ್ತರಣೆ, ಎಲೆಕ್ಟ್ರಿಕ್ ವಾಹನಗಳು (EV) ಹಾಗೂ ನವೀಕರಿಸಬಹುದಾದ ಇಂಧನ ಯೋಜನೆಗಳ ಹೆಚ್ಚಳದಿಂದ ತಾಮ್ರದ ಬೇಡಿಕೆ ಗಣನೀಯವಾಗಿ ಹೆಚ್ಚಿದೆ.
ಗಣಿ ಉತ್ಪಾದನೆಯಲ್ಲಿ ಕುಸಿತ: ಹೊಸ ತಾಮ್ರದ ಗಣಿಗಾರಿಕೆ ಯೋಜನೆಗಳು ವಿಳಂಬವಾಗಿರುವುದು ಮತ್ತು ಕೆಲವು ಪ್ರಮುಖ ಗಣಿಗಳಲ್ಲಿ ಉತ್ಪಾದನೆ ಕುಸಿದಿರುವುದರಿಂದ ಜಾಗತಿಕ ಪೂರೈಕೆ ಮೇಲೆ ಒತ್ತಡ ಉಂಟಾಗಿದೆ. ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರ ಹೆಚ್ಚುತ್ತಿರುವುದು ಬೆಲೆ ಏರಿಕೆಗೆ ಮತ್ತಷ್ಟು ಕಾರಣವಾಗಿದೆ.
ಭಾರತದ ಮಾರುಕಟ್ಟೆ ಮೇಲೂ ಪರಿಣಾಮ:
ಜಾಗತಿಕ ಮಾರುಕಟ್ಟೆಯಲ್ಲಿ ತಾಮ್ರದ ಬೆಲೆ ಏರಿಕೆಯ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲೂ ಕಂಡುಬಂದಿದೆ. ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಕಾಪರ್ ಕಂಪನಿಯ ಷೇರು ಮೌಲ್ಯ ಶೇ.5ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.
ಇನ್ನು, ಭಾರತದ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ತಾಮ್ರದ ಫ್ಯೂಚರ್ಸ್ ಬೆಲೆ ಕೆಜಿಗೆ ₹1,400ರ ಸಮೀಪ ತಲುಪಿದೆ. ರೂಪಾಯಿ ಮೌಲ್ಯದಲ್ಲಿ ಸ್ಥಿರತೆ ಇರುವುದರಿಂದ ಜಾಗತಿಕ ಮಾರುಕಟ್ಟೆಗೆ ಹೋಲಿಸಿದರೆ ದೇಶೀಯ ಬೆಲೆ ಏರಿಕೆಯ ಪ್ರಮಾಣ ಕೊಂಚ ನಿಯಂತ್ರಣದಲ್ಲಿದೆ ಎನ್ನಲಾಗಿದೆ.
ತಾಮ್ರವು ವಿದ್ಯುತ್ ಉಪಕರಣಗಳು, ಸೆಮಿಕಂಡಕ್ಟರ್‌ಗಳು, ವಾಹನ ತಯಾರಿಕೆ ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮಗಳಲ್ಲಿ ಪ್ರಮುಖ ಕಚ್ಚಾ ವಸ್ತುವಾಗಿದೆ. ಹೀಗಾಗಿ ತಾಮ್ರದ ಬೆಲೆ ಇದೇ ರೀತಿ ಏರಿಕೆಯಾಗುತ್ತಿದ್ದರೆ, ಮುಂದಿನ ದಿನಗಳಲ್ಲಿ ಈ ಕ್ಷೇತ್ರಗಳ ತಯಾರಿಕಾ ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇದೆ.



