ಕಾರವಾರ: ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ಕಾರವಾರ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ (FDA) ಪಂಡರಿನಾಥ್ ವಿ. ನಾಯ್ಕ (51) ಮೃತಪಟ್ಟಿದ್ದಾರೆ.
ಮಂಗಳವಾರ ಬೆಳಗ್ಗೆ ಎಂದಿನಂತೆ ಕಚೇರಿಗೆ ಆಗಮಿಸಿದ್ದ ಪಂಡರಿನಾಥ್ ನಾಯ್ಕ ಅವರು ತಮ್ಮ ಕರ್ತವ್ಯದಲ್ಲಿ ತೊಡಗಿದ್ದರು. ಈ ವೇಳೆ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಅವರು ಕಚೇರಿಯಲ್ಲೇ ಕುಸಿದುಬಿದ್ದಿದ್ದಾರೆ.
ಇದನ್ನು ಗಮನಿಸಿದ ಕಚೇರಿ ಸಿಬ್ಬಂದಿ ತಕ್ಷಣ ಅವರ ನೆರವಿಗೆ ಧಾವಿಸಿದ್ದಾರೆ. ಬಳಿಕ ತಹಶೀಲ್ದಾರ್ ಅವರ ಜೀಪ್ನಲ್ಲಿ ಪಂಡರಿನಾಥ್ ನಾಯ್ಕ ಅವರನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಪಂಡರಿನಾಥ್ ನಾಯ್ಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರು ದಿಢೀರ್ ಮೃತಪಟ್ಟ ಸುದ್ದಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಹಾಗೂ ಸಹೋದ್ಯೋಗಿಗಳಿಗೆ ಆಘಾತ ಉಂಟುಮಾಡಿದೆ. ಪಂಡರಿನಾಥ್ ನಾಯ್ಕ ಅವರ ಅಕಾಲಿಕ ನಿಧನಕ್ಕೆ ಕಚೇರಿ ಸಿಬ್ಬಂದಿ ಹಾಗೂ ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.



