ಬೀದರ್: ಕೆಪಿಎಸ್‌ಸಿ ಪಶುವೈದ್ಯರ ನೇಮಕಾತಿ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಸವರಾಜ್ ಕನ್ನಾಳೆ ಅವರ ಆಪ್ತರಿಗೆ ಇದೀಗ ಸಿಐಡಿ ಪೊಲೀಸರ ನೋಟಿಸ್ ಹಾಗೂ ಬಂಧನದ ಭೀತಿ ಶುರುವಾಗಿದೆ.
ಒಂದೆಡೆ ಬಸವರಾಜ್ ಕನ್ನಾಳೆ ಅವರ ಸಂಬಂಧಿಕರಿಗೆ ಸಿಐಡಿ ನೋಟಿಸ್ ಭಯ ಎದುರಾಗಿದ್ದರೆ, ಮತ್ತೊಂದೆಡೆ ಕನ್ನಾಳೆ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆಪ್ತರಿಗೂ ಆತಂಕ ಎದುರಾಗಿದೆ. ಕನ್ನಾಳೆ ಅವರ ಬ್ಯಾಂಕ್ ಖಾತೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ಹಾಗೂ ಹಣವನ್ನು ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡಿರುವ ಶಂಕೆಯ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಅವರ ಆಪ್ತರ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಇದೇ ತಿಂಗಳ 5ರಂದು ಸಿಐಡಿ ಪೊಲೀಸರು ಬೀದರ್ ನಗರದ ಚಿದ್ರಿ ಬಳಿ ಇರುವ ಲೈಫ್ ಇನ್ಶೂರೆನ್ಸ್ ಕಂಪನಿಯೊಂದರ ಮೇಲೆ ದಾಳಿ ನಡೆಸಿ, ಹಲವು ದಾಖಲೆಗಳನ್ನು ಪರಿಶೀಲಿಸಿದ್ದರು. ಈ ಕಂಪನಿಗೆ ಸಂಬಂಧಿಸಿದ ವ್ಯಕ್ತಿಗಳು ಹಾಗೂ ಬಸವರಾಜ್ ಕನ್ನಾಳೆ ಅವರ ಆಪ್ತರ ಮೇಲೂ ಸಿಐಡಿ ಅಧಿಕಾರಿಗಳ ನಿಗಾ ಮುಂದುವರಿದಿದೆ ಎನ್ನಲಾಗಿದೆ.
ಕನ್ನಾಳೆ ಅವರ ಆಪ್ತರಾಗಿರುವ ಪವನ್ ರೆಡ್ಡಿ, ಸಂಬಂಧಿತ ಕಂಪನಿಯ ಮಾಲೀಕರು, ಆರ್‌ಟಿಒ ಇನ್‌ಸ್ಪೆಕ್ಟರ್ ರಾಜಶೇಖರ್ ಚಿದ್ರಿ ಹಾಗೂ ಭಾಲ್ಕಿಯ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಓಂಕಾರ್ ಸೇರಿದಂತೆ ಕೆಲವರಿಗೆ ಇದೀಗ ಸಿಐಡಿ ತನಿಖೆಯ ಆತಂಕ ಎದುರಾಗಿದೆ.
ಕೆಪಿಎಸ್‌ಸಿ ನೇಮಕಾತಿ ಹಗರಣದ ತನಿಖೆ ಮುಂದುವರಿಸಿರುವ ಸಿಐಡಿ ಅಧಿಕಾರಿಗಳು ಹಣದ ವಹಿವಾಟು ಹಾಗೂ ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಸವರಾಜ್ ಕನ್ನಾಳೆ ಅವರೊಂದಿಗೆ ಸಂಪರ್ಕ ಹೊಂದಿದ್ದ ಇನ್ನಷ್ಟು ಮಂದಿಗೆ ನೋಟಿಸ್ ನೀಡುವ ಸಾಧ್ಯತೆಯಿದ್ದು, ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದೆ.



