HomeGadag Newsಬರದ ನಡುವೆಯೇ ಜಾನುವಾರುಗಳಿಗೆ ‘ಅಜೋಲಾ’ ಪೌಷ್ಟಿಕ ಮೇವು!

ಬರದ ನಡುವೆಯೇ ಜಾನುವಾರುಗಳಿಗೆ ‘ಅಜೋಲಾ’ ಪೌಷ್ಟಿಕ ಮೇವು!

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಬೆಂಗಳೂರು/ಗದಗ: ಮಳೆಯ ಅಭಾವ, ಹಸಿರು ಮೇವಿನ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದ ಜಾನುವಾರು ಸಾಕಣೆದಾರರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ, ಜಾನುವಾರುಗಳಿಗೆ ಸ್ಥಳೀಯವಾಗಿಯೇ ಪೌಷ್ಟಿಕ ಪೂರಕ ಮೇವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ರಾಜ್ಯದಾದ್ಯಂತ ₹3.78 ಕೋಟಿ ವೆಚ್ಚದಲ್ಲಿ 12,000 ಅಜೋಲಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ.

ಜಾನುವಾರುಗಳಿಗೆ, ಅದರಲ್ಲೂ ಹಾಲು ನೀಡುವ ದನ-ಕರುಗಳಿಗೆ ಅಗತ್ಯವಾದ ಪ್ರೋಟೀನ್, ಖನಿಜಾಂಶ ಸೇರಿದಂತೆ ಹಲವು ಪೌಷ್ಟಿಕಾಂಶಗಳನ್ನು ಹೊಂದಿರುವ ಅಜೋಲಾವನ್ನು ಪೂರಕ ಆಹಾರವಾಗಿ ಬಳಸಬಹುದಾಗಿದೆ. ಹಸಿರು ಮೇವಿನ ಕೊರತೆಯ ಸಂದರ್ಭದಲ್ಲಿ ರೈತರಿಗೆ ಕಡಿಮೆ ವೆಚ್ಚದಲ್ಲಿ ಲಭ್ಯವಾಗುವ ಪರ್ಯಾಯ ಪೌಷ್ಟಿಕ ಮೇವಾಗಿ ಅಜೋಲಾ ನೆರವಾಗಲಿದೆ.

ರಾಜ್ಯದ 31 ಜಿಲ್ಲೆಗಳ 240 ತಾಲ್ಲೂಕುಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಜಿಲ್ಲಾವಾರು ಭೌತಿಕ ಮತ್ತು ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. ಪ್ರತಿ ಅಜೋಲಾ ಘಟಕಕ್ಕೆ ಗರಿಷ್ಠ ₹3,150 ವೆಚ್ಚ ಅಂದಾಜಿಸಲಾಗಿದೆ.

ಬಾಗಲಕೋಟೆ ಮತ್ತು ತುಮಕೂರು ಜಿಲ್ಲೆಗಳಿಗೆ ತಲಾ 500, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಗಳಿಗೆ ತಲಾ 450 ಘಟಕಗಳನ್ನು ಹಂಚಿಕೆ ಮಾಡಲಾಗಿದೆ. ಬೀದರ್, ಚಿಕ್ಕಬಳ್ಳಾಪುರ, ಧಾರವಾಡ, ಹಾಸನ, ಹಾವೇರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ತಲಾ 400 ಘಟಕಗಳು; ಕೊಪ್ಪಳ, ಮಂಡ್ಯ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಿಗೆ ತಲಾ 350 ಘಟಕಗಳನ್ನು ನಿಗದಿಪಡಿಸಲಾಗಿದೆ.

ಚಿತ್ರದುರ್ಗ, ದಾವಣಗೆರೆ, ಕೋಲಾರ, ವಿಜಯನಗರ ಹಾಗೂ ಯಾದಗಿರಿ ಜಿಲ್ಲೆಗಳಿಗೆ ತಲಾ 300; ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ಕೊಡಗು ಹಾಗೂ ರಾಮನಗರ ಜಿಲ್ಲೆಗಳಿಗೆ ತಲಾ 250 ಘಟಕಗಳ ಗುರಿ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 200 ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಕಡಿಮೆ ಜಾಗ, ಕಡಿಮೆ ವೆಚ್ಚದಲ್ಲೇ ಘಟಕ

ಅಜೋಲಾ ಘಟಕಗಳನ್ನು ರೈತರ ಮನೆ ಅಥವಾ ಕೊಟ್ಟಿಗೆಯ ಸಮೀಪವೇ ಕಡಿಮೆ ಜಾಗದಲ್ಲಿ ನಿರ್ಮಿಸಬಹುದಾಗಿದೆ. ಸುಮಾರು 10 ಅಡಿ ಉದ್ದ, 4 ಅಡಿ ಅಗಲ ಹಾಗೂ 1 ಅಡಿ ಆಳದ ಘಟಕವನ್ನು ನಿರ್ಮಿಸಲಾಗುತ್ತದೆ.

ಪ್ರತಿ ಘಟಕದ ₹3,150 ವೆಚ್ಚದಲ್ಲಿ ಯುವಿ-ಸ್ಟೆಬಿಲೈಸ್ಡ್ ಎಚ್‌ಡಿಪಿಇ ಶೀಟ್‌ಗೆ ₹1,350, ನೆರಳು ಬಲೆ ಹಾಗೂ ಬಿದಿರು/ಜಿಐ ಫ್ರೇಮ್‌ಗೆ ₹650, ಫಲವತ್ತಾದ ಮಣ್ಣು, ಸಗಣಿ ಮತ್ತು ಸೂಪರ್ ಫಾಸ್ಫೇಟ್ ಮಿಶ್ರಣಕ್ಕೆ ₹250 ಹಾಗೂ ಎರಡು ಕೆ.ಜಿ. ಅಜೋಲಾ ತಳಿ/ಬೀಜಕ್ಕೆ ₹200 ವೆಚ್ಚವಾಗಲಿದೆ. ಸಾಮಗ್ರಿಗಳಿಗೆ ₹2,450 ಹಾಗೂ ಸ್ಥಳ ಸಿದ್ಧತೆ, ತೊಟ್ಟಿ ಅಳವಡಿಕೆ, ಸಂರಕ್ಷಣೆ ಮತ್ತು ಬೀಜ ಬಿತ್ತನೆಗೆ ಎರಡು ಮಾನವ ದಿನಗಳ ಕೂಲಿ ವೆಚ್ಚವಾಗಿ ₹700 ನಿಗದಿಪಡಿಸಲಾಗಿದೆ.

ಸ್ವಚ್ಛ ನೀರಿರುವ ಸ್ಥಳಕ್ಕಷ್ಟೇ ಆದ್ಯತೆ

ಜಿಲ್ಲೆಗೆ ನಿಗದಿಪಡಿಸಿದ ಗುರಿಯನ್ನು ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿವಾರು ಹಂಚಿಕೆ ಮಾಡಿ, ಸೂಕ್ತ ಸ್ಥಳ ಮತ್ತು ನೀರಿನ ಲಭ್ಯತೆ ಹೊಂದಿರುವ ಜಾನುವಾರು ಸಾಕಣೆದಾರರನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಲಾಗುತ್ತದೆ. ಕಲುಷಿತ ನೀರಿನಲ್ಲಿ ಅಜೋಲಾ ಬೆಳೆಸುವುದರಿಂದ ಮಾಲಿನ್ಯಕಾರಕಗಳ ಅಪಾಯ ಇರುವ ಹಿನ್ನೆಲೆಯಲ್ಲಿ ಸ್ವಚ್ಛ ನೀರಿನ ಲಭ್ಯತೆ ಇರುವ ಸ್ಥಳಗಳನ್ನಷ್ಟೇ ಆಯ್ಕೆ ಮಾಡಲಾಗುತ್ತದೆ.

ಫಲಾನುಭವಿಗಳಿಗೆ ಅಜೋಲಾ ಉತ್ಪಾದನೆ, ಕೊಯ್ಲು, ಸ್ವಚ್ಛತೆ, ಸಂಸ್ಕರಣೆ ಹಾಗೂ ಜಾನುವಾರುಗಳಿಗೆ ನೀಡುವ ವಿಧಾನ ಕುರಿತು ತಾಂತ್ರಿಕ ತರಬೇತಿ ನೀಡಲಾಗುತ್ತದೆ. ಯೋಜನೆಯನ್ನು VB-G RAM G ಮಾರ್ಗಸೂಚಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗೆ ಒಳಪಟ್ಟು ಅನುಷ್ಠಾನಗೊಳಿಸಲಾಗುತ್ತದೆ.

ಪ್ರತಿ ಘಟಕದ ಫಲಾನುಭವಿಯ ವಿವರ, ಆಧಾರ್, ಜಿಪಿಎಸ್ ಸ್ಥಳ ಹಾಗೂ ಘಟಕದ ಕಾರ್ಯನಿರ್ವಹಣೆಯ ಮೊದಲು ಮತ್ತು ನಂತರದ ಛಾಯಾಚಿತ್ರಗಳನ್ನು ಕಡ್ಡಾಯವಾಗಿ ದಾಖಲಿಸಲಾಗುತ್ತದೆ. ಜಿಲ್ಲಾ ಉಪನಿರ್ದೇಶಕರು ಮಾಸಿಕ ವೇಳಾಪಟ್ಟಿ ಸಿದ್ಧಪಡಿಸಿ ಯೋಜನೆ ಅನುಷ್ಠಾನಗೊಳಿಸಲಿದ್ದು, ಪ್ರತಿ ತಿಂಗಳ 5ರೊಳಗೆ ಪ್ರಗತಿ ವರದಿಯನ್ನು ರಾಜ್ಯ ಕಚೇರಿಗೆ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.

ಅಜೋಲಾ ಯೋಜನೆಯ ಪ್ರಮುಖ ಅಂಶಗಳು

  • ಒಟ್ಟು ವೆಚ್ಚ: ₹3.78 ಕೋಟಿ
  • ಒಟ್ಟು ಘಟಕಗಳು: 12,000
  • ಜಿಲ್ಲೆಗಳು: 31
  • ತಾಲ್ಲೂಕುಗಳು: 240
  • ಪ್ರತಿ ಘಟಕದ ವೆಚ್ಚ: ₹3,150
  • ಗದಗ ಜಿಲ್ಲೆಯ ಗುರಿ: 350 ಘಟಕ
  • ಗದಗಕ್ಕೆ ಅನುದಾನ: ₹11.02 ಲಕ್ಷ
  • ಘಟಕದ ಗಾತ್ರ: 10 × 4 × 1 ಅಡಿ

ಗದಗ ಜಿಲ್ಲೆಗೆ 350 ಘಟಕ

ಗದಗ ಜಿಲ್ಲೆಯ ಏಳು ತಾಲ್ಲೂಕುಗಳಿಗೆ 350 ಅಜೋಲಾ ಘಟಕಗಳ ಗುರಿ ನೀಡಲಾಗಿದ್ದು, ಇದಕ್ಕಾಗಿ ₹11.02 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. ಇದೇ ರೀತಿ ಬೆಳಗಾವಿ ಜಿಲ್ಲೆಗೆ 750, ವಿಜಯಪುರಕ್ಕೆ 650, ಉತ್ತರ ಕನ್ನಡಕ್ಕೆ 600 ಹಾಗೂ ಕಲಬುರಗಿಗೆ 550 ಘಟಕಗಳ ಗುರಿ ನೀಡಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img