ಬೆಂಗಳೂರು: ಭಾರತ ರತ್ನ ಪುರಸ್ಕೃತ ಖ್ಯಾತ ವಿಜ್ಞಾನಿ ಪ್ರೊ. ಸಿಎನ್ಆರ್ ರಾವ್ ಅವರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಯಾವುದೇ ನೋಟಿಸ್ ಜಾರಿ ಮಾಡಿಲ್ಲ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಪಷ್ಟಪಡಿಸಿದೆ.
2002ನೇ ಸಾಲಿನ ಮತದಾರರ ಪಟ್ಟಿಯಲ್ಲಿ ಪ್ರೊ. ಸಿಎನ್ಆರ್ ರಾವ್ ಅವರು 76-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿದ್ದರು. ಆಗ ಅವರ ಹೆಸರು ‘ರಾಮ’ ಎಂದು ನಮೂದಾಗಿತ್ತು. ಪ್ರಸ್ತುತ 157-ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 59ರಲ್ಲಿ ಕ್ರಮ ಸಂಖ್ಯೆ 187ರಲ್ಲಿ ‘ಸಿಎನ್ಆರ್ ರಾವ್’ ಎಂಬ ಹೆಸರಿನೊಂದಿಗೆ ಅವರು ಮತದಾರರಾಗಿ ನೋಂದಾಯಿತರಾಗಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಅಂಗವಾಗಿ ನಡೆಯುವ ವಿಚಾರಣೆಗೆ ಸಂಬಂಧಿಸಿದಂತೆ, ಹಳೆಯ ಹಾಗೂ ಪ್ರಸ್ತುತ ಮತದಾರರ ಪಟ್ಟಿಯಲ್ಲಿನ ಹೆಸರಿನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಈ ವಿಷಯ ಗಮನಕ್ಕೆ ಬಂದಿದೆ.
ಆದರೆ ಈ ವಿಚಾರದಲ್ಲಿ ಪ್ರೊ. ಸಿಎನ್ಆರ್ ರಾವ್ ಅವರಿಗೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ ಎಂದು ಜಿಬಿಎ ತಿಳಿಸಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಗೊಳಿಸಲು ಶಿಫಾರಸು ಮಾಡಲಾಗಿದ್ದು, ಅದರಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಹೀಗಾಗಿ ಸಿಎನ್ಆರ್ ರಾವ್ ಅವರಿಗೆ SIR ನೋಟಿಸ್ ನೀಡಲಾಗಿದೆ ಎಂಬ ವರದಿಗಳು ಸರಿಯಲ್ಲ ಎಂದು ಜಿಬಿಎ ಸ್ಪಷ್ಟನೆ ನೀಡಿದೆ.



