ವಿಜಯಸಾಕ್ಷಿ ಸುದ್ದಿ, ಕೊಣ್ಣೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ, ನರಗುಂದ ಇವರ ವತಿಯಿಂದ ಕೊಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ಪೋಷಣ್ ಮಾಸಾಚರಣೆ ಹಾಗೂ ‘ಬೇಟಿ ಬಚಾವೋ, ಬೇಟಿ ಪಡಾವೋ’ ಕಾರ್ಯಕ್ರಮದ ಅಂಗವಾಗಿ ಜಾಗೃತಿ ಜಾಥಾ ನಡೆಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಗಣಿ ಜಾಥಾಕ್ಕೆ ಚಾಲನೆ ನೀಡಿ, ಸರ್ಕಾರದ ಹಲವು ಪ್ರಮುಖ ಯೋಜನೆಗಳಲ್ಲಿ ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯೂ ಮಹತ್ವದ್ದಾಗಿದೆ. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದರಿಂದ ಸುಲಭ ಹೆರಿಗೆಗೆ ಸಹಕಾರಿಯಾಗುವುದಲ್ಲದೆ, ಜನಿಸುವ ಮಕ್ಕಳು ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಬಹುದು ಎಂದು ತಿಳಿಸಿದರು.
ಮೇಲ್ವಿಚಾರಕಿ ಪರಿಮಳಾ ಹೂಗಾರ ಮಾತನಾಡಿ, ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ಸಬಲೀಕರಣಕ್ಕೆ ಇಲಾಖೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಭಾಗ್ಯಲಕ್ಷ್ಮಿ, ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಮಾತೃಪೂರ್ಣ ಯೋಜನೆಗಳು ಮಹಿಳೆಯರು ಮತ್ತು ಮಕ್ಕಳಿಗೆ ಉಪಯುಕ್ತವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಲೆಕ್ಕಾಧಿಕಾರಿ ಟಿ.ಆರ್. ಪಾಟೀಲ, ಪೋಷಣ್ ಅಭಿಯಾನ ಕಾರ್ಯಕ್ರಮ ಸಂಯೋಜಕ ಮಂಜು ಗುಗ್ಗರಿ, ಅಂಗನವಾಡಿ ಕಾರ್ಯಕರ್ತೆಯರಾದ ಶಾರದಾ ರೋಣದ, ಗಿರಿಜಾ ಮಾಚಕನೂರ, ಚಾಂದಬೀ ಮುಲ್ಲಾನವರ, ಶಾಂತಾ ಜಿಗಳೂರ, ಸುನಂದಾ ಬಾಗಲಕೋಟ, ಬಿ.ಐ. ನವಲಗುಂದ, ಎಸ್.ಎನ್. ಹುಚ್ಚಪ್ಪಯ್ಯನಮಠ, ರೇಣುಕಾ ತಳವಾರ, ದ್ರಾಕ್ಷಾಯಿಣಿ ಬಂಡಿವಡ್ಡರ, ಗೀತಾ ಪಾಟೀಲ, ಕೃಷ್ಣವ್ವ ಕರಿರೆಡ್ಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.



