HomeKarnataka NewsKPSC ಪಶುವೈದ್ಯರ ನೇಮಕಾತಿ ಬೆನ್ನಲ್ಲೇ KASನಲ್ಲೂ ಅಕ್ರಮ ಶಂಕೆ: ಅಭ್ಯರ್ಥಿ ಮಮಿತಾ ಮನೆ ಮೇಲೆ ಸಿಐಡಿ...

KPSC ಪಶುವೈದ್ಯರ ನೇಮಕಾತಿ ಬೆನ್ನಲ್ಲೇ KASನಲ್ಲೂ ಅಕ್ರಮ ಶಂಕೆ: ಅಭ್ಯರ್ಥಿ ಮಮಿತಾ ಮನೆ ಮೇಲೆ ಸಿಐಡಿ ದಿಢೀರ್ ದಾಳಿ!

ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಕೀಯ ಹುದ್ದೆಗಳ ಭಾರಿ ನೇಮಕಾತಿ ಹಗರಣದ ತನಿಖೆ ಕಾವೇರಿರುವ ಬೆನ್ನಲ್ಲೇ, ಇದೀಗ ಪ್ರತಿಷ್ಠಿತ ಕೆಎಎಸ್ (KAS) ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಗಂಭೀರ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ (CID) ಅಧಿಕಾರಿಗಳು ಕೆಎಎಸ್ ಅಭ್ಯರ್ಥಿ ಮಮಿತಾ ಅವರ ಕಲಬುರಗಿಯ ನಿವಾಸದ ಮೇಲೆ ದಿಢೀರ್ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಜೊತೆ ಅಕ್ರಮ ಲಿಂಕ್: 2023-24ನೇ ಸಾಲಿನ ಕೆಎಎಸ್ ಪರೀಕ್ಷೆ ಬರೆದು, ಸಂದರ್ಶನವನ್ನೂ ಮುಗಿಸಿ ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿ ಮಮಿತಾ, ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ಮೂಲಕ ಅಕ್ರಮ ಮಾರ್ಗದಲ್ಲಿ ಹುದ್ದೆ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ಈ ಕುರಿತು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಹಾಗೂ ಅಭ್ಯರ್ಥಿ ಮಮಿತಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಆಧಾರದ ಮೇಲೆ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ತಂಡವು, ಕಲಬುರಗಿ ನಗರದ ನ್ಯೂ ಓಝಾ ಲೇಔಟ್‌ನಲ್ಲಿರುವ ಮಮಿತಾ ಅವರ ಮನೆ ಮೇಲೆ ದಾಳಿ ನಡೆಸಿದೆ.

ಲ್ಯಾಪ್ಟಾಪ್ ಹಾಗೂ ಪ್ರಮುಖ ದಾಖಲೆಗಳು ಜಫ್ತಿ: ಶೋಧ ಕಾರ್ಯಾಚರಣೆಯ ವೇಳೆ ಕೆಎಎಸ್ ಅಕ್ರಮಕ್ಕೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳು ಹಾಗೂ ಲ್ಯಾಪ್ಟಾಪ್ ಒಂದನ್ನು ಸಿಐಡಿ ಅಧಿಕಾರಿಗಳು ಜಫ್ತಿ ಮಾಡಿದ್ದಾರೆ. ಲ್ಯಾಪ್ಟಾಪ್‌ನಲ್ಲಿರುವ ಡಿಜಿಟಲ್ ಡೇಟಾವನ್ನು ರಿಟ್ರೀವ್ (Retrieve) ಮಾಡಿ ಪರಿಶೀಲಿಸಲು ತಜ್ಞರ ನೆರವು ಪಡೆಯಲಾಗುತ್ತಿದೆ.

ಮಮಿತಾ ಅವರು ಪ್ರಸ್ತುತ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿರುವ ತಮ್ಮ ಸಹೋದರಿ ವಿಜಯಲಕ್ಷ್ಮಿ ಕೋಬಾಳಕರ್ ಅವರೊಂದಿಗೆ ಕಲಬುರಗಿಯಲ್ಲಿ ವಾಸವಿದ್ದಾರೆ. ಸಿಐಡಿ ದಾಳಿ ನಡೆಸಿದ ಸಂದರ್ಭದಲ್ಲಿ ಮಮಿತಾ ಮನೆಯಲ್ಲಿ ಇರಲಿಲ್ಲ, ಸಹೋದರಿ ವಿಜಯಲಕ್ಷ್ಮಿ ಮಾತ್ರ ಹಾಜರಿದ್ದರು ಎಂದು ಮೂಲಗಳು ಖಚಿತಪಡಿಸಿವೆ.

ಇಡಿ ದಾಳಿ ಬೆನ್ನಲ್ಲೇ ಸಿಐಡಿ ತನಿಖೆ ತೀವ್ರ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಅಕ್ರಮ ಹಣ ವರ್ಗಾವಣೆ (Money Laundering) ನಡೆದಿದೆಯೇ ಎಂಬ ಶಂಕೆಯ ಹಿನ್ನೆಲೆಯಲ್ಲಿ ಆಗಸ್ಟ್ 18ರಂದು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಕೂಡ ಇದೇ ನಿವಾಸದ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಇದೀಗ ಸಿಐಡಿ ಅಧಿಕಾರಿಗಳು ಕೂಡ ದಾಳಿ ನಡೆಸಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಕೆಪಿಎಸ್‌ಸಿ ಅಕ್ರಮದ ಜಾಲ ಮತ್ತಷ್ಟು ಬಯಲಾಗುವ ಸಾಧ್ಯತೆಯಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img