HomeKarnataka Newsಮೊದಲ ವಿವಾಹ ರದ್ದತಿ ತಡೆಯಾಜ್ಞೆ ಇರುವಾಗ 2ನೇ ಪತ್ನಿಗೆ ಜೀವನಾಂಶ ನೀಡಲಾಗದು; ಹೈಕೋರ್ಟ್

ಮೊದಲ ವಿವಾಹ ರದ್ದತಿ ತಡೆಯಾಜ್ಞೆ ಇರುವಾಗ 2ನೇ ಪತ್ನಿಗೆ ಜೀವನಾಂಶ ನೀಡಲಾಗದು; ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ಮೊದಲ ಪತ್ನಿಯೊಂದಿಗೆ ನಡೆದಿದ್ದ ವಿವಾಹ ವಿಚ್ಛೇದನಕ್ಕೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಸಂದರ್ಭದಲ್ಲಿ ನಡೆದ ಎರಡನೇ ವಿವಾಹವನ್ನು ಕಾನೂನುಬದ್ಧ ವಿವಾಹವೆಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಅಂತಹ ಎರಡನೇ ಪತ್ನಿಗೆ ಜೀವನಾಂಶ ಪಡೆಯುವ ಹಕ್ಕು ಇರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಎರಡನೇ ಪತ್ನಿಯಾಗಿ ಜೀವನಾಂಶ ನೀಡುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಬೆಳಗಾವಿಯ ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಧಾರವಾಡ ಪೀಠ, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಅರ್ಜಿಯನ್ನು ವಜಾಗೊಳಿಸಿದೆ.

ಅರ್ಜಿದಾರ ಮಹಿಳೆ ಕನ್ನಡ ತತ್ವಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದು, ಕಾಲೇಜಿನಲ್ಲಿ ಉಪನ್ಯಾಸಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಆಕೆ ಅನಕ್ಷರಸ್ಥೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವಿವಾಹಕ್ಕೂ ಮುನ್ನ ಪತಿಯ ಮೊದಲ ವಿವಾಹಕ್ಕೆ ಸಂಬಂಧಿಸಿದ ವಿಚ್ಛೇದನ ಆದೇಶವನ್ನು ಪರಿಶೀಲಿಸಿಯೇ ಮದುವೆಯಾಗಿದ್ದಾಗಿ ಮಹಿಳೆ ಹೇಳಿಕೊಂಡಿದ್ದರು. ಆದರೆ, ಮೊದಲ ಪತ್ನಿಯ ವಿಚ್ಛೇದನ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಬಾಕಿ ಇತ್ತು ಮತ್ತು ಆ ಆದೇಶಕ್ಕೆ ತಡೆಯಾಜ್ಞೆ ಜಾರಿಯಲ್ಲಿತ್ತು ಎಂಬ ವಿಚಾರವನ್ನು ಅರ್ಜಿದಾರರು ಉಲ್ಲೇಖಿಸಿರಲಿಲ್ಲ.

ಹೀಗಾಗಿ ಮೊದಲ ವಿವಾಹದ ವಿಚ್ಛೇದನಕ್ಕೆ ತಡೆಯಾಜ್ಞೆ ಇತ್ತು ಎಂಬ ವಿಷಯ ಅರ್ಜಿದಾರ ಮಹಿಳೆಗೆ ತಿಳಿದಿರಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಸುಪ್ರೀಂಕೋರ್ಟ್‌ನ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ಹೈಕೋರ್ಟ್, ಮೊದಲ ವಿವಾಹ ಜಾರಿಯಲ್ಲಿರುವ ವಿಷಯವನ್ನು ಮರೆಮಾಚಿ ವಂಚನೆಯಿಂದ ಎರಡನೇ ಮದುವೆಯಾಗಿದ್ದ ಸಂದರ್ಭದಲ್ಲಿ ಮಾತ್ರ ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಎರಡನೇ ಪತ್ನಿಗೆ ಜೀವನಾಂಶದ ಹಕ್ಕು ದೊರೆಯಬಹುದು ಎಂದು ಹೇಳಿದೆ.

ಆದರೆ, ಈ ಪ್ರಕರಣದಲ್ಲಿ ಮೊದಲ ಮದುವೆ ಜಾರಿಯಲ್ಲಿರುವ ವಿಚಾರ ಅರ್ಜಿದಾರ ಮಹಿಳೆಗೆ ತಿಳಿದಿತ್ತು ಎಂದು ಪೀಠ ಹೇಳಿದೆ. ಜೊತೆಗೆ, ಹಿಂದೂ ಸಂಪ್ರದಾಯದಂತೆ ವಿವಾಹ ನಡೆದಿತ್ತು ಎಂದು ಮಹಿಳೆ ಹೇಳಿಕೊಂಡಿದ್ದರೂ, ಸಪ್ತಪದಿ ಹಾಗೂ ಪವಿತ್ರ ಅಗ್ನಿಸಾಕ್ಷಿಯಂತಹ ಅಗತ್ಯ ವಿಧಿವಿಧಾನಗಳು ನಡೆದಿಲ್ಲ ಎಂಬುದನ್ನು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.

ವಿವಾಹದ ವೇಳೆ ಮೊಬೈಲ್‌ನಲ್ಲಿ ಕೆಲವು ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ, ಆ ಛಾಯಾಚಿತ್ರಗಳನ್ನು ತೆಗೆದವರು ಯಾರು ಎಂಬುದನ್ನು ಅರ್ಜಿದಾರರು ವಿವರಿಸಿಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ

ಪ್ರಕರಣದ ಪ್ರತಿವಾದಿಯಾಗಿರುವ ಪತಿ ಈ ಹಿಂದೆ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದರು. ಇಬ್ಬರ ನಡುವೆ ಕೌಟುಂಬಿಕ ಕಲಹ ಉಂಟಾದ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿತ್ತು.

ಈ ನಡುವೆ ಪತಿ ಮತ್ತೊಂದು ವಿವಾಹಕ್ಕಾಗಿ ಹುಡುಗಿಯನ್ನು ಹುಡುಕುತ್ತಿರುವ ವಿಚಾರ ಅರ್ಜಿದಾರ ಮಹಿಳೆಗೆ ತಿಳಿದಿತ್ತು. ಆಗ ಪತಿ ತಾನು ಈಗಾಗಲೇ ವಿವಾಹವಾಗಿದ್ದು, ಕೌಟುಂಬಿಕ ನ್ಯಾಯಾಲಯದಿಂದ ವಿಚ್ಛೇದನ ಪಡೆದಿರುವುದಾಗಿ ತಿಳಿಸಿ, ವಿಚ್ಛೇದನ ಆದೇಶದ ಪ್ರತಿಯನ್ನೂ ನೀಡಿದ್ದರು. ಅದನ್ನು ಪರಿಶೀಲಿಸಿದ ಬಳಿಕ ಮಹಿಳೆಯ ಕುಟುಂಬಸ್ಥರು ಎರಡನೇ ವಿವಾಹಕ್ಕೆ ಒಪ್ಪಿಗೆ ನೀಡಿದ್ದರು.

ನಂತರ ಮಹಿಳೆ ಮತ್ತು ಪತಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ವಿವಾಹದ ಬಳಿಕ ಸುಮಾರು ಎಂಟು ದಿನಗಳ ಕಾಲ ಪತಿಯ ಮನೆಯಲ್ಲಿ ಇದ್ದ ವೇಳೆ ತನಗೆ ಹಿಂಸೆ ನೀಡಲಾಗುತ್ತಿತ್ತು ಎಂದು ಮಹಿಳೆ ಆರೋಪಿಸಿದ್ದರು. ಮನೆಯಿಂದ ಹೊರಬಂದ ಬಳಿಕ ಜೀವನ ನಿರ್ವಹಣೆಗಾಗಿ ಪತಿಯಿಂದ ಜೀವನಾಂಶ ಕೊಡಿಸುವಂತೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.

ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಪತಿ, ಮೊದಲ ವಿವಾಹದ ವಿಚ್ಛೇದನ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ತಿಳಿಸಿದ್ದರು. ಜೊತೆಗೆ, ತಾವು ಅನಾರೋಗ್ಯದಿಂದ ಬಳಲುತ್ತಿದ್ದು ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

ಸಾಕ್ಷ್ಯಾಧಾರಗಳು ಹಾಗೂ ಎರಡೂ ಕಡೆಯ ವಾದಗಳನ್ನು ಆಲಿಸಿದ ಕೌಟುಂಬಿಕ ನ್ಯಾಯಾಲಯ, ಮಹಿಳೆ ಸಲ್ಲಿಸಿದ್ದ ಜೀವನಾಂಶದ ಅರ್ಜಿಯನ್ನು ವಜಾಗೊಳಿಸಿತ್ತು. ಇದೀಗ ಹೈಕೋರ್ಟ್ ಕೂಡ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದ್ದು, ಮೊದಲ ವಿವಾಹದ ವಿಚ್ಛೇದನಕ್ಕೆ ತಡೆಯಾಜ್ಞೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ನಡೆದ ಎರಡನೇ ವಿವಾಹದ ಆಧಾರದ ಮೇಲೆ ಅರ್ಜಿದಾರೆಯನ್ನು ಕಾನೂನುಬದ್ಧ ಪತ್ನಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img