ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕ ವೃತ್ತಿ ಕೇವಲ ಜೀವನೋಪಾಯವಲ್ಲ. ಶ್ರದ್ಧೆಯಿಂದ ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿಯಾಗಿದೆ. ತ್ಯಾಗಮಯ ಶಿಕ್ಷಕರ ಬದುಕು ಸದಾ ಆದರ್ಶಮಯವಾಗಿದ್ದು, ಅವರೇ ಸುಂದರ ಸಮಾಜದ ನಿರ್ಮಾತೃಗಳು ಎಂದು ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್‌ನ ಪಿಡಿಸಿ ಪ್ರೇಮಾ ಗುಳಗೌಡರ ಹೇಳಿದರು.
ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಶಿಕ್ಷಕರ ಮೌಲ್ಯಯುತ ಮಾರ್ಗದರ್ಶನ ಮಕ್ಕಳ ಅನುಭವ ಮತ್ತು ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದೆ. ಶಿಕ್ಷಕ-ವಿದ್ಯಾರ್ಥಿ ನಡುವಿನ ಪ್ರಯತ್ನ ಹಾಗೂ ಸ್ವಪ್ರಯತ್ನದ ಬೆಸುಗೆ ಮಕ್ಕಳ ಬಾಳಿಗೆ ಬೆಳಕು ನೀಡಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ ಎಂದರು.
ಕ್ಲಬ್ ಅಧ್ಯಕ್ಷೆ ಮಂಜುಳಾ ಅಕ್ಕಿ ಮಾತನಾಡಿ, ಶಿಕ್ಷಣವು ಮಾನವನ ಸಾಮರ್ಥ್ಯ ವಿಕಸನಗೊಳಿಸುವ ಹಾಗೂ ಸಮಾನ, ನ್ಯಾಯಯುತ ಸಮಾಜ ನಿರ್ಮಿಸಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿರುವ ಮೂಲಭೂತ ಅಂಶವಾಗಿದೆ. ಮಕ್ಕಳನ್ನು ಅಕ್ಷರದ ಮೂಲಕ ಸಶಕ್ತಗೊಳಿಸುವಲ್ಲಿ ಶಿಕ್ಷಕರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ಕ್ಲಬ್ ಕಾರ್ಯದರ್ಶಿ ಪೂಜಾ ಭೂಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಗದಗ ಜಿಲ್ಲೆಯ ವಿವಿಧ ತಾಲೂಕುಗಳಿಂದ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಸೇವೆ ಅನುಪಮವಾಗಿದೆ ಎಂದರು.
ಕ್ಲಬ್ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ಸಿಂಗಟರಾಯನಕೇರಿ ತಾಂಡಾದ ಸರೋಜಾ ಬಂಡಿ, ಸ.ಪ್ರಾ.ಶಾಲೆ ನಂ. 2ರ ಕಮಲಾಕ್ಷಿ ರೇಷ್ಮೆ, ಎಕಲಾಸಪುರದ ಸುರಯ್ಯ ನದಾಫ್, ಸ.ಪ್ರಾ.ಶಾಲೆ ನಂ. 13ರ ಸುಧಾ ಬೇವಿನಮಟ್ಟಿ, ಉರ್ದು ಪ್ರಾ.ಶಾಲೆ ನಂ. 4ರ ಎನ್.ಎಚ್. ಜಕ್ಕಲಿ, ಎಚ್.ಪಿ.ಎಸ್. ಗಂಗಿಮಡಿಯ ರೇಣವ್ವ ಹಾದಿಮನಿ, ಪಿಪಿಜಿ ಪ್ರಾ.ಶಾಲೆಯ ಉಡಚಮ್ಮ ವಾಲ್ಮೀಕಿ, ಎಚ್.ಪಿ.ಎಸ್. ನಂ. 8ರ ಎಸ್.ಎಚ್. ಮೊರಬರಡ್ಡಿ ಹಾಗೂ ಎಲ್.ಪಿ.ಯು.ಎಸ್. ಕಣಗಿನಹಾಳದ ರವಿ ಕಟ್ಟಿಮನಿ ಅವರನ್ನು ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಲಾಯಿತು.
ಶಿಕ್ಷಕರ ಮಾರ್ಗದರ್ಶನವೇ ಮಕ್ಕಳ ಬದುಕಿಗೆ ಬೆಳಕು ನೀಡಿ, ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಶಕ್ತಿ. ಶಿಕ್ಷಕರ ಸೇವೆ ಸಮಾಜದ ಭವಿಷ್ಯ ನಿರ್ಮಿಸುವ ಮಹತ್ವದ ಕಾರ್ಯ.
— ಪ್ರೇಮಾ ಗುಳಗೌಡರ, ಪಿಡಿಸಿ, ಇನ್ನರ್‌ವ್ಹೀಲ್ ಕ್ಲಬ್



