ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಪ್ರೌಢಶಾಲೆಗಳಲ್ಲಿ ತೃತೀಯ ಭಾಷೆ ಬದಲಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಕೃತಕ ಬುದ್ಧಿಮತ್ತೆ (ಎಐ) ವಿಷಯ ಅಳವಡಿಸುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ಗದಗ ಜಿಲ್ಲಾ ಘಟಕ ಆಗ್ರಹಿಸಿದೆ.
ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಬಿಜಾಪೂರ ನೇತೃತ್ವದಲ್ಲಿ ಹಿಂದಿ ಶಿಕ್ಷಕರು ಶುಕ್ರವಾರ ಗದಗ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
2026-27ನೇ ಸಾಲಿನಲ್ಲಿ ತೃತೀಯ ಭಾಷೆಯ ಬದಲಿಗೆ ಎಐ ಅಳವಡಿಸುವುದು ಸೂಕ್ತವಲ್ಲ. ಈ ಕಾರಣದಿಂದ ತೃತೀಯ ಭಾಷೆ ಬೋಧಿಸುತ್ತಿರುವ ಶಿಕ್ಷಕರನ್ನು ಅಗತ್ಯವಿರುವ ಹತ್ತಿರದ ಶಾಲೆಗಳಿಗೆ ನಿಯೋಜಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶಕರು ಹೊರಡಿಸಿರುವ ಸುತ್ತೋಲೆ ಶಿಕ್ಷಕರಲ್ಲಿ ಆತಂಕ ಮೂಡಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದೇಶದಿಂದ ಕನ್ನಡ, ಹಿಂದಿ, ಇಂಗ್ಲಿಷ್, ಸಂಸ್ಕೃತ ಸೇರಿದಂತೆ ತೃತೀಯ ಭಾಷಾ ಶಿಕ್ಷಕರ ಸೇವಾ ಭದ್ರತೆ ಹಾಗೂ ಭವಿಷ್ಯದ ಬಗ್ಗೆ ಅನಿಶ್ಚಿತತೆ ಉಂಟಾಗಲಿದೆ. ತ್ರಿಭಾಷಾ ಸೂತ್ರವನ್ನು ಯಥಾವತ್ತಾಗಿ ಮುಂದುವರಿಸಿ, ತೃತೀಯ ಭಾಷಾ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ನಿಯೋಜಿಸಬಾರದು ಎಂದು ಒತ್ತಾಯಿಸಿದರು.
ತೃತೀಯ ಭಾಷೆಗೆ ಬದಲಾಗಿ ಎಐ ಅಳವಡಿಸುವ ಬದಲು, ಈಗಿರುವ ಕಂಪ್ಯೂಟರ್ ಸಾಕ್ಷರತೆ ಅಥವಾ ನೀತಿ ಶಿಕ್ಷಣದ ವಾರದ ನಾಲ್ಕು ಅವಧಿಗಳನ್ನು ಬಳಸಿಕೊಂಡು ಎಐಗೆ ಹೆಚ್ಚುವರಿ ಅವಧಿ ಕಲ್ಪಿಸಬೇಕು. ಇದರಿಂದ ಭಾಷಾ ಕಲಿಕೆಯ ಜತೆಗೆ ವಿದ್ಯಾರ್ಥಿಗಳಿಗೆ ಎಐ ಶಿಕ್ಷಣವೂ ದೊರೆಯಲಿದೆ ಎಂದು ಸಂಘ ಸಲಹೆ ನೀಡಿದೆ.
ಕಳೆದ 10 ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ತೃತೀಯ ಭಾಷಾ ಶಿಕ್ಷಕರ ನೇಮಕಾತಿ ನಡೆದಿಲ್ಲ. ಈ ಬಾರಿಯ ನೇಮಕಾತಿಯಲ್ಲಿಯೂ ಹಿಂದಿ ಶಿಕ್ಷಕರನ್ನು ಕೈಬಿಡಲಾಗಿದ್ದು, ಸಾವಿರಾರು ಹಿಂದಿ ಬಿ.ಎಡ್. ಪದವೀಧರರಿಗೆ ಅನ್ಯಾಯವಾಗಿದೆ. ವಯೋಮಿತಿ ಮೀರುವ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ಹಿಂದಿ ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ. ರಾಠೋಡ, ರಾಜ್ಯ ಪ್ರತಿನಿಧಿ ಉಮೇಶ ನಿಪ್ಪಾಣಿಕರ, ನಾಗಯ್ಯ ಹಿರೇಮಠ, ಎಸ್.ಎಸ್. ಪಾಟೀಲ, ಕೆ.ಆರ್. ಬಾಕಳೆ, ಬಿ.ಸಿ. ಜೋಗಿನ, ಎಂ.ಡಿ. ನದಾಫ, ಡಾ.ಸಿ.ಎಂ. ರಫೀ, ಡಾ.ಎಚ್.ಎಂ. ಅತ್ತಾರ, ಎನ್.ಎಂ. ಕಾಗದಗಾರ, ನಾಝಬೀನ್ಭಾನು ಎಂ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎಐ ಕಲಿಕೆಗೆ ನಮ್ಮ ವಿರೋಧವಿಲ್ಲ. ಆದರೆ ತೃತೀಯ ಭಾಷೆಯನ್ನೇ ತೆಗೆದುಹಾಕಿ ಎಐ ಅಳವಡಿಸುವ ಕ್ರಮದಿಂದ ಭಾಷಾ ಶಿಕ್ಷಣ ಹಾಗೂ ಶಿಕ್ಷಕರ ಸೇವಾ ಭದ್ರತೆಗೆ ಧಕ್ಕೆಯಾಗಲಿದೆ. ಸರ್ಕಾರ ಪರ್ಯಾಯ ವ್ಯವಸ್ಥೆ ರೂಪಿಸಬೇಕು.
— ಎ.ಎಲ್. ಬಿಜಾಪೂರ, ಜಿಲ್ಲಾಧ್ಯಕ್ಷ, ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘ



