ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಸ್ಲಿಮರಿಗೆ ರಂಜಾನ್ ಪವಿತ್ರ ಮಾಸವಾಗಿರುವಂತೆ ಹಿಂದೂಗಳಿಗೂ ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದೆ. ಶ್ರಾವಣದಲ್ಲಿ ಧಾರ್ಮಿಕ ಆಚರಣೆ, ಪುರಾಣ ಪ್ರವಚನ ಹಾಗೂ ಸತ್ಸಂಗಗಳಲ್ಲಿ ಪಾಲ್ಗೊಳ್ಳುವುದರಿಂದ ಧಾರ್ಮಿಕ ಪ್ರಜ್ಞೆ ಮತ್ತು ಸಂಸ್ಕಾರ ವೃದ್ಧಿಯಾಗುತ್ತದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ಆಯೋಜಿಸಿದ್ದ ಪುಟ್ಟರಾಜ ಗವಾಯಿಗಳಿಂದ ರಚಿತ ಶ್ರೀ ವೀರಭದ್ರೇಶ್ವರ ಪುರಾಣದ ಮಂಗಲೋತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪುರಾಣ ಪ್ರವಚನದ ಉದ್ದೇಶದಿಂದ ಆರಂಭವಾದ ತಾಯಿ ಪಾರ್ವತಿ ಮಕ್ಕಳ ಬಳಗ ಇಂದು ಹೆಮ್ಮರವಾಗಿ ಬೆಳೆದಿದೆ. ಸಂಘ-ಸಂಸ್ಥೆ ಸ್ಥಾಪಿಸುವುದು ಸುಲಭವಾದರೂ ಅವುಗಳನ್ನು ನಿರಂತರವಾಗಿ ಮುನ್ನಡೆಸುವುದು ಕಷ್ಟ. ಇಂತಹ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವ ಬಳಗದ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಕ್ತಿಮಂದಿರ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಅನುದಾನ ಕೋರಿ ಮನವಿ ಸಲ್ಲಿಸಲಾಗಿದೆ. ಗುರುಭಕ್ತರಾಗಿರುವ ಅವರು ತಮ್ಮ ಕಚೇರಿಯಲ್ಲಿ ಲಿಂ. ಜಗದ್ಗುರು ಗಂಗಾಧರ ಸ್ವಾಮಿಗಳ ಭಾವಚಿತ್ರ ಇರಿಸಿಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ಮುಕ್ತಿಮಂದಿರ ಸಭಾಭವನ ಉದ್ಘಾಟನೆಗೆ ಅವರು ಆಗಮಿಸುವ ನಿರೀಕ್ಷೆಯಿದ್ದು, ಈ ಸಂದರ್ಭದಲ್ಲಿ ಪ್ರತಿಷ್ಠಿತ ವೀರಗಂಗಾಧರ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಸುವರ್ಣಬಾಯಿ ಬಹದ್ದೂರ ದೇಸಾಯಿ ವಹಿಸಿದ್ದರು. ಉಪಾಧ್ಯಕ್ಷೆ ಜಯಲಕ್ಷ್ಮಿ ಗಡ್ಡದೇವರಮಠ, ಕಾರ್ಯದರ್ಶಿ ಜಯಲಕ್ಷ್ಮಿ ಗಡ್ಡದೇವರಮಠ, ರೋಹಿಣಿಬಾಯಿ ಬಹದ್ದೂರ ದೇಸಾಯಿ, ಶಾರಕ್ಕ ಮಹಾಂತಶೆಟ್ಟರ ಹಾಗೂ ಪುರಾಣ ಪ್ರವಚನಕಾರ ಪ್ರಭುಗೌಡ ಯಕ್ಕಿಕೊಪ್ಪ ವೇದಿಕೆಯಲ್ಲಿದ್ದರು.
ಜೆ.ಡಿ. ಲಮಾಣಿ, ರೂಪಾ ನವಲೆ, ಸೋಮಯ್ಯ ವಿರಕ್ತಮಠ, ಜಗದೀಶ ಶಿರಹಟ್ಟಿ, ರಮೇಶ ನವಲೆ, ಪರಮೇಶ ತಡಹಾಳ, ಎಸ್.ಎನ್. ಮಳಲಿ, ಹನುಮಂತಪ್ಪ ಭಜಂತ್ರಿ, ಎ.ಎನ್. ನಾವಿ ಸೇರಿದಂತೆ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ವೈಷ್ಣವಿ ಕ್ಷತ್ರಿ ಪ್ರಾರ್ಥಿಸಿದರು. ಸುಚಿತ್ರ ಜಗದಮನಿ ಹಾಗೂ ಶೀಲಾ ತಳವಾರ ಸ್ವಾಗತಿಸಿದರು. ಎಂ.ಸಿ. ಹಿರೇಮಠ ನಿರೂಪಿಸಿದರು.
ಧಾರ್ಮಿಕ ಕಾರ್ಯಕ್ರಮಗಳು ಕೇವಲ ಆಚರಣೆಗೆ ಸೀಮಿತವಾಗದೆ, ನಮ್ಮ ಬದುಕಿನಲ್ಲಿ ಸದಾಚಾರ, ಶಿಸ್ತು ಮತ್ತು ಸಂಸ್ಕಾರ ಬೆಳೆಸುವಂತಿರಬೇಕು. ಪುರಾಣ ಮತ್ತು ಸತ್ಸಂಗದ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಅದರ ನಿಜವಾದ ಫಲ ದೊರೆಯುತ್ತದೆ.
— ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು



