HomeGadag Newsಬರ ಘೋಷಣೆಗೆ ನರಗುಂದ ಸ್ತಬ್ಧ

ಬರ ಘೋಷಣೆಗೆ ನರಗುಂದ ಸ್ತಬ್ಧ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರಗುಂದ: ಬರಪೀಡಿತ ತಾಲೂಕುಗಳ ಪಟ್ಟಿಯಿಂದ ನರಗುಂದವನ್ನು ಕೈಬಿಟ್ಟ ಸರ್ಕಾರದ ವಿರುದ್ಧ ಅನ್ನದಾತರು ರೊಚ್ಚಿಗೆದ್ದಿದ್ದು, ಬರ ಘೋಷಣೆಗೆ ಆಗ್ರಹಿಸಿ ಶನಿವಾರ ಕರೆ ನೀಡಿದ್ದ ಬಂದ್‌ಗೆ ಪಟ್ಟಣ ಸಂಪೂರ್ಣ ಸ್ತಬ್ಧವಾಯಿತು.

ಮಹಾದಾಯಿಗಾಗಿ ಮಹಾವೇದಿಕೆ ಹಾಗೂ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಬೆಂಬಲ ನೀಡಿದರು.

ಪ್ರಮುಖ ಮಾರುಕಟ್ಟೆಗಳು ಸೇರಿದಂತೆ ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ರೈತರು ಬೃಹತ್ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಂದ್‌ನ ಬಿಸಿ ಸಾರಿಗೆ ವ್ಯವಸ್ಥೆಗೂ ತಟ್ಟಿದ್ದು, ಸರ್ಕಾರಿ ಬಸ್‌ಗಳು ರಸ್ತೆಗಿಳಿಯದ ಕಾರಣ ಬಸ್ ನಿಲ್ದಾಣ ಭಣಗುಡುತ್ತಿತ್ತು. ದೂರದ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡಿದರು.

ಗದಗ ಜಿಲ್ಲೆಯ ಏಳು ತಾಲೂಕುಗಳ ಪೈಕಿ ಗಜೇಂದ್ರಗಡವನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದ್ದು, ನರಗುಂದ, ಗದಗ, ಮುಂಡರಗಿ, ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ರೋಣ ತಾಲೂಕುಗಳನ್ನು ಕೈಬಿಡಲಾಗಿದೆ. ಮಳೆ ಮಾಪನ ಕೇಂದ್ರಗಳ ವರದಿ ಆಧರಿಸಿ ನರಗುಂದವನ್ನು ಬರಪಟ್ಟಿಯಿಂದ ಹೊರಗಿಡಲಾಗಿದೆ ಎಂದು ರೈತರು ಆರೋಪಿಸಿದರು.

ಮಳೆ ಇಲ್ಲದಿದ್ದರೂ ತಪ್ಪು ಮಳೆ ವರದಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ತಕ್ಷಣ ನರಗುಂದವನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಗದಗ, ಧಾರವಾಡ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೂ ಪರಿಹಾರ ನೀಡುವಂತೆ ಒತ್ತಾಯಿಸಿದರು.

ನರಗುಂದದ ರೈತರು ಬರದಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ವಾಸ್ತವ ಸ್ಥಿತಿಯನ್ನು ಅರಿತು ಸರ್ಕಾರ ಕೂಡಲೇ ಬರ ಘೋಷಿಸಿ ಪರಿಹಾರ ನೀಡಬೇಕು. ಇಲ್ಲವಾದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು.

— ಶಂಕರಣ್ಣ ಅಂಬಲಿ, ರೈತ ಮುಖಂಡ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img