ಚಿಕ್ಕಮಗಳೂರು: ಈ ಬಾರಿ ಚಿಕ್ಕಮಗಳೂರು ನಗರದಲ್ಲಿ ಹಿಂದೂ ಮಹಾ ಗಣಪತಿ ಉತ್ಸವವನ್ನು ಹಿಂದೆಂದಿಗಿಂತಲೂ ಅದ್ದೂರಿಯಾಗಿ ಆಚರಿಸಲು ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ಅಷ್ಟಕ್ಕೂ ಈ ಬಾರಿ ಗಣಪತಿಗೆ ಭಕ್ತರು ವಿಶೇಷ ಉಡುಗೊರೆಯನ್ನೇ ನೀಡಿದ್ದಾರೆ. ಬರೋಬ್ಬರಿ 12 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ 5 ಕೆಜಿ ಬೆಳ್ಳಿ ಕಿರೀಟ ಹಾಗೂ ಆಯುಧಗಳನ್ನು ಮಾಡಿಸಿಕೊಡಲಾಗಿದೆ.
ಇದರಲ್ಲಿ 4 ಕೆಜಿ ತೂಕದ ಬೆಳ್ಳಿ ಕಿರೀಟ ಹಾಗೂ ಒಟ್ಟು 1 ಕೆಜಿ ತೂಕದ ಎರಡು ಬೆಳ್ಳಿ ಆಯುಧಗಳಿವೆ. ಈ ಬೆಳ್ಳಿ ಆಭರಣಗಳನ್ನು ಶೃಂಗೇರಿಯಲ್ಲಿ ಪೂಜೆ ಮಾಡಿಸಿ ಚಿಕ್ಕಮಗಳೂರಿಗೆ ತರಲಾಗಿದೆ.
ಕಿರೀಟಕ್ಕೆ ಶೃಂಗೇರಿಯ ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ತೀರ್ಥ ಶ್ರೀಗಳು ಪೂಜೆ ನೆರವೇರಿಸಿ ಪುಷ್ಪಾರ್ಚನೆ ಮಾಡಿದ್ದಾರೆ. ಇದೇ ವೇಳೆ ಹಿಂದೂ ಮಹಾ ಗಣಪತಿ ಆಡಳಿತ ಮಂಡಳಿ ಶೃಂಗೇರಿ ಶ್ರೀಗಳಿಗೂ ಉತ್ಸವಕ್ಕೆ ಆಹ್ವಾನ ನೀಡಿದೆ.
ಇನ್ನು ಒಟ್ಟು 11 ದಿನಗಳ ಕಾಲ ನಡೆಯಲಿರುವ ಗಣೇಶೋತ್ಸವದಲ್ಲಿ ವಿಘ್ನೇಶ್ವರನು ಬೆಳ್ಳಿ ಕಿರೀಟ ಹಾಗೂ ಆಯುಧಗಳ ಸಮೇತ ಭಕ್ತರಿಗೆ ದರ್ಶನ ನೀಡಲಿದ್ದಾನೆ.
ಕಳೆದ 12 ವರ್ಷಗಳಿಂದ ಪ್ರತಿ ವರ್ಷವೂ ವಿಭಿನ್ನ ರೀತಿಯಲ್ಲಿ ಗಣೇಶೋತ್ಸವ ಆಚರಿಸುತ್ತಿರುವ ಆಡಳಿತ ಮಂಡಳಿ, ಈ ಬಾರಿಯೂ ಮತ್ತಷ್ಟು ವಿಜೃಂಭಣೆಯಿಂದ ಹಬ್ಬ ಆಚರಿಸಲು ಸಿದ್ಧವಾಗಿದೆ.



