ಹಾಸನ: ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಗೃಹಿಣಿಯೊಬ್ಬರು ಬಲಿಯಾಗಿರುವ ಘಟನೆ ಹಾಸನ ನಗರದ ಎನ್.ಆರ್. ವೃತ್ತದಲ್ಲಿ ನಡೆದಿದೆ.
ಅಪರ್ಣಾ ಡಿ.ಜೆ. ಎಂಬ 31 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಹಾಸನ ತಾಲೂಕಿನ ದೊಡ್ಡಆಲದಹಳ್ಳಿ ಗ್ರಾಮದ ಅಪರ್ಣಾ ಬೆಂಗಳೂರಿನಲ್ಲಿ ಪತಿ ಯೋಗೀಶ್ ಜೊತೆ ವಾಸವಾಗಿದ್ದರು. ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ತವರು ಮನೆಗೆ ಬಂದಿದ್ದರು.
ನಿನ್ನೆ ಆಸ್ಪತ್ರೆಗೆಂದು ಸ್ನೇಹಿತೆ ರಕ್ಷಿತಾ ಜೊತೆ ಸ್ಕೂಟಿಯಲ್ಲಿ ಹಾಸನ ನಗರಕ್ಕೆ ಬಂದಿದ್ದರು. ಆಸ್ಪತ್ರೆ ಕೆಲಸ ಮುಗಿಸಿ ಊರಿಗೆ ವಾಪಸ್ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಅಪರ್ಣಾ ಹಾಗೂ ರಕ್ಷಿತಾ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಅಪರ್ಣಾ ಬಸ್‌ನ ಚಕ್ರಕ್ಕೆ ಸಿಲುಕಿದ್ದು, ಸ್ವಲ್ಪ ದೂರದವರೆಗೆ ಎಳೆದೊಯ್ಯಲಾಗಿದೆ. ಕೂಡಲೇ ಆಟೋ ಚಾಲಕ ಕುಮಾರ್ ಅವರು ಅಪರ್ಣಾರನ್ನು ಬಸ್ ಚಕ್ರದಿಂದ ಹೊರತೆಗೆದು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅಪರ್ಣಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಬಸ್ ಚಾಲಕ ಬ್ರೇಕ್ ಹಿಡಿಯಲಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಅಪರ್ಣಾ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದೇ ವೇಳೆ ಅಪಘಾತದ ಸಂದರ್ಭದಲ್ಲಿ ಅಪರ್ಣಾ ಧರಿಸಿದ್ದ ಎರಡು ಎಳೆ ಚಿನ್ನದ ಮಾಂಗಲ್ಯ ಸರ ಕಳುವಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

