ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಮೈಸೂರಿನಲ್ಲಿ ನೂತನ ನಿವಾಸಕ್ಕೆ ಗೃಹಪ್ರವೇಶ ಮಾಡಿದೆ. ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ನೂತನ ಬಂಗಲೆಯಲ್ಲಿ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗೃಹಪ್ರವೇಶ ನೆರವೇರಿತು.
80X120 ಅಡಿ ಅಳತೆಯ ನಿವೇಶನದಲ್ಲಿ ಎರಡು ಅಂತಸ್ತಿನ ಬಂಗಲೆಯನ್ನು ನಿರ್ಮಿಸಲಾಗಿದ್ದು, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಬಹುಕಾಲದ ಬಯಕೆಯಂತೆ ಮೈಸೂರಿನಲ್ಲಿ ಸ್ವಂತ ಮನೆ ನಿರ್ಮಾಣವಾಗಿದೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಗೃಹಪ್ರವೇಶ ಕಾರ್ಯಕ್ರಮ ನಡೆಸಲಾಯಿತು.
ಅಧಿಕೃತ ಪ್ರವಾಸ ಪಟ್ಟಿ ಇಲ್ಲದೆ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಹಾಗೂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಕುಟುಂಬದ ಸದಸ್ಯರೊಂದಿಗೆ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಹಿಂದಿನ ರಾತ್ರಿ ನೂತನ ಮನೆಯಲ್ಲಿ ವಿವಿಧ ಧಾರ್ಮಿಕ ಪೂಜೆಗಳನ್ನು ನೆರವೇರಿಸಲಾಗಿದ್ದು, ಬೆಳಗ್ಗೆಯೂ ಪೂಜಾ ವಿಧಿ-ವಿಧಾನಗಳನ್ನು ಮುಂದುವರಿಸಿ ಗೃಹಪ್ರವೇಶ ಪೂರ್ಣಗೊಳಿಸಲಾಯಿತು.
ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ವಿರೋಧ ಪಕ್ಷದ ನಾಯಕರಾಗಿ ಸುದೀರ್ಘ ರಾಜಕೀಯ ಸೇವೆ ಸಲ್ಲಿಸಿದ್ದರೂ ಮೈಸೂರಿನಲ್ಲಿ ಇದುವರೆಗೆ ಸ್ವಂತ ಮನೆ ಹೊಂದಿರಲಿಲ್ಲ. ಮೈಸೂರಿಗೆ ಬಂದಾಗಲೆಲ್ಲಾ ತಮ್ಮ ಆಪ್ತ ಸ್ನೇಹಿತ ಮರಿಸ್ವಾಮಿ ಅವರ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದರು.
ಇದೀಗ ಮೈಸೂರಿನಲ್ಲಿ ಸ್ವಂತ ನಿವಾಸ ನಿರ್ಮಾಣವಾಗಿದ್ದು, ಪತ್ನಿ ಪಾರ್ವತಿ ಅವರ ಬಹುದಿನಗಳ ಆಸೆಯೂ ಈಡೇರಿದೆ. ನೂತನ ಮನೆಯ ಗೃಹಪ್ರವೇಶವನ್ನು ಕುಟುಂಬಸ್ಥರು ಸರಳವಾಗಿ ನೆರವೇರಿಸಿದ್ದಾರೆ.



